ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ (Satluj) ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಒಟಿಟಿಯಿಂದ ಬ್ಯಾನ್ ಆಗಿರುವುದು ಸದ್ಯ ಭಾರತೀಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸೆನ್ಸಾರ್ ಮಂಡಳಿಯ (CBFC) ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರು ಸಿನಿಮಾ ನೋಡದೆಯೇ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅನುರಾಗ್ ಗಂಭೀರ ಆರೋಪ ಮಾಡಿದ್ದಾರೆ.
ಸಿನಿಮಾ ನೋಡದೆಯೇ ಅಡ್ಡಿಪಡಿಸಿದ ಪ್ರಸೂನ್ ಜೋಶಿ?
‘ಸತ್ಲುಜ್ ಚಿತ್ರದ ನಿರ್ದೇಶಕ ಹನಿ ಟ್ರೆಹಾನ್ ನನ್ನ ಬಳಿ ಸೆನ್ಸಾರ್ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ ಬೇಸರ ಹಂಚಿಕೊಂಡಿದ್ದರು. ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರಿಗೆ ಈ ಚಿತ್ರದ ಬಗ್ಗೆ ತೀವ್ರ ಆಕ್ಷೇಪವಿತ್ತು. ಆದರೆ ಆಶ್ಚರ್ಯ ಎಂದರೆ, ಅವರು ಸಿನಿಮಾವನ್ನು ನೋಡಿಯೇ ಇರಲಿಲ್ಲ! ಬರೀ ಈ ಸಿನಿಮಾ ಮಾತ್ರವಲ್ಲ, ಬೇರೆ ಹಲವು ಚಿತ್ರಗಳ ವಿಷಯದಲ್ಲೂ ಅಧ್ಯಕ್ಷರು ಸಿನಿಮಾವನ್ನು ವೀಕ್ಷಿಸುವುದೇ ಇಲ್ಲ ಎಂಬುದು ನನಗೆ ಗೊತ್ತು’ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಪರಿಶೀಲನಾ ಸಮಿತಿ ವರದಿ ಆಧಾರದ ಮೇಲೆ ನಿರ್ಧಾರ?
ಮುಂದುವರಿದು ಮಾತನಾಡಿದ ಅನುರಾಗ್ ಕಶ್ಯಪ್, ‘ಸಿಬಿಎಫ್‌ಸಿ ಅಧ್ಯಕ್ಷರು ಸ್ವತಃ ಸಿನಿಮಾಗಳನ್ನು ನೋಡುವುದಿಲ್ಲ. ಕೇವಲ ಪರಿಶೀಲನಾ ಸಮಿತಿ ನೀಡುವ ವರದಿಯನ್ನಷ್ಟೇ ನಂಬುತ್ತಾರೆ. ಆ ವರದಿಯ ಆಧಾರದ ಮೇಲೆ ಏಕಪಕ್ಷೀಯವಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಹೀಗಾಗಿಯೇ ಸತ್ಲುಜ್ ಸಿನಿಮಾವನ್ನು ಯಾವುದೇ ಸ್ಪಷ್ಟ ಕಾರಣ ನೀಡದೆ ಒಟಿಟಿಯಿಂದ ಏಕಾಏಕಿ ಹಿಂಪಡೆಯಲಾಗಿದೆ. ಈ ಬಗ್ಗೆ ನಿರ್ದೇಶಕ ಹನಿ ಟ್ರೆಹಾನ್‌ಗೂ ಯಾವುದೇ ಅಧಿಕೃತ ವಿವರಣೆ ಸಿಕ್ಕಿಲ್ಲ’ ಎಂದು ಕಿಡಿಕಾರಿದ್ದಾರೆ.
ಎರಡೇ ದಿನಕ್ಕೆ ಒಟಿಟಿಯಿಂದ ಮಾಯವಾದ ಸಿನಿಮಾ
ಹಿಂದೆ ‘ಪಂಜಾಬ್ 95’ ಎಂಬ ಹೆಸರಿದ್ದ ‘ಸತ್ಲುಜ್’ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಬೇಕಿತ್ತು. ಬರೋಬ್ಬರಿ ಮೂರು ವರ್ಷಗಳ ಕಾಲ ಸೆನ್ಸಾರ್ ಮಂಡಳಿಯ ಜೊತೆ ಹೋರಾಟ ನಡೆಸಿದ ಚಿತ್ರತಂಡ, ಕೊನೆಗೂ ಜುಲೈ 3ರಂದು ಜೀ5 (Zee5) ಒಟಿಟಿಯಲ್ಲಿ ಸಿನಿಮಾವನ್ನು ಸದ್ದಿಲ್ಲದೆ ರಿಲೀಸ್ ಮಾಡಿತ್ತು. ಆದರೆ ಬಿಡುಗಡೆಯಾದ ಎರಡೇ ದಿನಕ್ಕೆ, ಅಂದರೆ ಜುಲೈ 5ರಂದು ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಈ ಚಿತ್ರವನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲಾಯಿತು.
ಇದನ್ನೂ ಓದಿ: ಒಟಿಟಿ ಸಿನಿಮಾಗಳಿಗೂ ಸೆನ್ಸಾರ್ ಪ್ರಮಾಣಪತ್ರ ಕಡ್ಡಾಯ? ‘ಸತ್ಲುಜ್’ ವಿವಾದದ ಬೆನ್ನಲ್ಲೇ ಕೇಂದ್ರದ ಚಿಂತನೆ
ಈ ವಿವಾದದ ಬಗ್ಗೆ ಒಟಿಟಿ ಸಂಸ್ಥೆ ಜೀ5 ಅಧಿಕೃತ ಪ್ರಕಟಣೆ ಹೊರಡಿಸಿದ್ದು, ‘ಕೆಲವು ಬೆಳವಣಿಗೆಗಳ ಕಾರಣದಿಂದ ಸತ್ಲುಜ್ ಸಿನಿಮಾ ಸದ್ಯಕ್ಕೆ ಭಾರತದಲ್ಲಿ ಲಭ್ಯವಿರುವುದಿಲ್ಲ. ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ಶೀಘ್ರದಲ್ಲೇ ಸಿನಿಮಾವನ್ನು ವೀಕ್ಷಕರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ತಿಳಿಸಿದೆ. ಆದರೆ, ಚಿತ್ರದ ನಿರ್ದೇಶಕ ಹನಿ ಟ್ರೆಹಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ಸಿನಿಮಾವನ್ನು ಡಿಲೀಟ್ ಮಾಡುವ ಮುನ್ನ ನಮಗಾಗಲಿ ಅಥವಾ ಚಿತ್ರದ ನಿರ್ಮಾಪಕರಿಗಾಗಲಿ ಯಾವುದೇ ಫೋನ್ ಕರೆ ಬಂದಿರಲಿಲ್ಲ. ಆದರೆ ಜೀ5 ಸಂಸ್ಥೆಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಸಿನಿಮಾ ಪ್ರದರ್ಶನ ತಡೆಯುವಂತೆ ಪತ್ರ ಬಂದಿತ್ತು ಎಂಬ ಮಾಹಿತಿ ನಮಗೆ ಲಭ್ಯವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
