ಬಾಲಿವುಡ್ ಮತ್ತು ಪಂಜಾಬಿ ಚಿತ್ರರಂಗದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ (Satluj) ಸಿನಿಮಾ ದಿನಕ್ಕೊಂದು ಹೊಸ ವಿವಾದದ ಮೂಲಕ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನಾಧಾರಿತ ಈ ಬಯೋಪಿಕ್, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಈಗ ಈ ಚಿತ್ರದ ಅಧಿಕೃತ ಐಎಂಡಿಬಿ (IMDb) ರೇಟಿಂಗ್ಸ್ ದಿಢೀರನೆ ನಾಪತ್ತೆಯಾಗಿದೆ.
ಬುಧವಾರ (ಜುಲೈ 8) ಮಧ್ಯಾಹ್ನದವರೆಗೆ ಆಲಿಯಾ ಭಟ್ ನಟನೆಯ ‘ಆಲ್ಫಾ’ ಮತ್ತು ಅಕ್ಷಯ್ ಕುಮಾರ್ ಅವರ ‘ವೆಲ್ಕಮ್ ಟು ದಿ ಜಂಗಲ್’ ನಂತಹ ಇತ್ತೀಚಿನ ಚಿತ್ರಗಳ ಐಎಂಡಿಬಿ ರೇಟಿಂಗ್ಸ್ ಕಾಣಿಸುತ್ತಿದ್ದವು. ಆದರೆ, ಈ ಹಿಂದೆ ‘ಪಂಜಾಬ್ 95’ ಎಂದು ಹೆಸರಿಡಲಾಗಿದ್ದ, ಸದ್ಯ 9.5ರಷ್ಟು ಭರ್ಜರಿ ರೇಟಿಂಗ್ ಹೊಂದಿದ್ದ ‘ಸತ್ಲುಜ್’ ಚಿತ್ರದ ರೇಟಿಂಗ್ ಪುಟ ಮಾತ್ರ ಸಂಪೂರ್ಣವಾಗಿ ಕಾಣೆಯಾಗಿದೆ.
ಎರಡು ದಿನದಲ್ಲೇ ಒಟಿಟಿಯಿಂದ ಔಟ್:
ಕಳೆದ ವಾರವಷ್ಟೇ ಈ ಸಿನಿಮಾ ಯಾವುದೇ ಮುನ್ಸೂಚನೆ ಇಲ್ಲದೆ Zee5 ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಈ ಚಿತ್ರವನ್ನು ಒಟಿಟಿಯಿಂದ ಕಿತ್ತೊಗೆಯಲಾಗಿತ್ತು. ಇದಕ್ಕೂ ಮುನ್ನ, ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಬರೋಬ್ಬರಿ 127 ಕಟ್ಗಳನ್ನು ಸೂಚಿಸಿತ್ತು. ಆದರೆ ಚಿತ್ರದ ನಿರ್ದೇಶಕ ಹನಿ ಟ್ರೆಹಾನ್, ‘ಒಂದೇ ಒಂದು ಸೀನ್ ಕಟ್ ಮಾಡಿದರೂ ನಾವು ಚಿತ್ರದೊಂದಿಗೆ ನಮ್ಮ ಹೆಸರನ್ನು ಉಳಿಸಿಕೊಳ್ಳುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು.
ಸಂಜಯ್ ಗುಪ್ತಾ ಆಕ್ರೋಶ:
ಚಿತ್ರದ ಐಎಂಡಿಬಿ ರೇಟಿಂಗ್ ಡಿಲೀಟ್ ಆಗಿರುವುದನ್ನು ಬಾಲಿವುಡ್ನ ಪ್ರಸಿದ್ಧ ನಿರ್ದೇಶಕ ಸಂಜಯ್ ಗುಪ್ತಾ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ನಿನ್ನೆ ರಾತ್ರಿವರೆಗೂ ಈ ಚಿತ್ರಕ್ಕೆ 9.5 ರೇಟಿಂಗ್ ಇತ್ತು. ಇಂದು ಅದು ಮಾಯವಾಗಿದೆ. ನಾನೇನೂ ಐಎಂಡಿಬಿ ರೇಟಿಂಗ್ಸ್ ಅನ್ನು ಹೆಚ್ಚು ನಂಬುವುದಿಲ್ಲ. ಆದರೆ, ಇವೆಲ್ಲ ಎಷ್ಟು ಬೋಗಸ್ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಪ್ರಮಾಣಪತ್ರ ಪಡೆಯದೇ ‘ಸತ್ಲುಜ್’ ಸಿನಿಮಾ ಬಿಡುಗಡೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರೋಪ
ಪೈರಸಿ ಲಿಂಕ್ ಹಂಚಿಕೊಳ್ಳಲು ಕರೆ ನೀಡಿದ ದಿಲ್ಜಿತ್:
ಸಿನಿಮಾವನ್ನು ಜೀ5 ಒಟಿಟಿಯಿಂದ ತೆಗೆದುಹಾಕಿದ ನಂತರ ನಟ ದಿಲ್ಜಿತ್ ದೋಸಾಂಜ್ ಇನ್ಸ್ಟಾಗ್ರಾಮ್ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಿದರು. ‘ಈಗಾಗಲೇ ಯಾರೆಲ್ಲಾ ಸಿನಿಮಾವನ್ನು ಡೌನ್ಲೋಡ್ ಮಾಡಿಕೊಂಡಿದ್ದೀರೋ, ಅವರೆಲ್ಲ ಇದರ ಲಿಂಕ್ಗಳನ್ನು ಬೇರೆಯವರಿಗೂ ತಲುಪಿಸಿ. ಈ ಸಿನಿಮಾವನ್ನು ಇನ್ಮುಂದೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ಪೈರಸಿಗೆ ಬೆಂಬಲ ನೀಡಿದರು. ಮತ್ತೊಂದೆಡೆ ಪ್ರಕಟಣೆ ಹೊರಡಿಸಿರುವ Zee5 ಸಂಸ್ಥೆಯು, ಚಿತ್ರವನ್ನು ಶೀಘ್ರದಲ್ಲೇ ಮತ್ತೆ ಒಟಿಟಿಗೆ ತರಲು ಪ್ರಯತ್ನಿಸುತ್ತಿದ್ದು, ಅಲ್ಲಿಯವರೆಗೆ ಯಾರೂ ಪೈರೇಟೆಡ್ ಲಿಂಕ್ಗಳನ್ನು ಬಳಸಬೇಡಿ ಎಂದು ವೀಕ್ಷಕರಲ್ಲಿ ಮನವಿ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.