
T20 World Cup 2026: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರ ಸದ್ದಗಿಸುವುದೇ ನಮ್ಮ ಗುರಿ ಎಂದಿದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಪಂದ್ಯದ ಬಳಿಕ ಸ್ತಬ್ಧರಾಗಿ ನಿಂತಿರುವುದು ಕಂಡು ಬಂದಿದೆ.
ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಿಚೆಲ್ ಸ್ಯಾಂಟ್ನರ್, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಹೇಳಿದಂತೆಯೇ, ಲಕ್ಷಾಂತರ ಭಾರತೀಯ ಅಭಿಮಾನಿಗಳ ಮುಂದೆ ಆಡುವಾಗ “ಸ್ಟೇಡಿಯಂನಲ್ಲಿರುವ ಅಭಿಮಾನಿಗಳನ್ನು ಮೌನಗೊಳಿಸುವುದೇ ನಮ್ಮ ಗುರಿ” ಎಂದಿದ್ದರು.
ಈ ಮೂಲಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳ ಸದ್ದಡಗಿಸಿ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಸ್ಯಾಂಟ್ನರ್ ವ್ಯಕ್ತಪಡಿಸಿದ್ದರು.
ಆದರೆ ಫೈನಲ್ ಪಂದ್ಯವನ್ನು ಟೀಮ್ ಇಂಡಿಯಾ ಏಕಪಕ್ಷೀಯವಾಗಿ ಮುಗಿಸುತ್ತಿದ್ದಂತೆ ಇತ್ತ ನಾಯಕ ಮಿಚೆಲ್ ಸ್ಯಾಂಟ್ನರ್ ಭಾವುಕರಾಗಿ ಕಂಡು ಬಂದರು. ಅದರಲ್ಲೂ ಮ್ಯಾಚ್ ಮುಗಿದ ಬಳಿಕ ನಿಶ್ಶಬದ್ಧರಾಗಿ ಮೈದಾನದಲ್ಲಿ ಏಕಾಂಗಿಯಾಗಿ ನಿಂತಿದ್ದರು.
ಇದೀಗ ಟಿ20 ವಿಶ್ವಕಪ್ ಬಳಿಕ “ಕಣ್ಣೀರು ತುಂಬಿದ ಕಣ್ಣುಗಳು”ಗಳೊಂದಿಗೆ ಕಾಣಿಸಿಕೊಂಡ ಮಿಚೆಲ್ ಸ್ಯಾಂಟ್ನರ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ಫೋಟೋಗೆ ಸದ್ದಡಗಿಸಲು ಬಂದು ಸದ್ದಿಲ್ಲದೇ ನಿಂತಿದ್ದಾರಾ ಎಂಬಾರ್ಥದಲ್ಲಿ ಅನೇಕರು ಪ್ರತಿಕ್ರಿಯಿಸಿ ಕಾಲೆಳೆದಿದ್ದಾರೆ.