ಮೆಡಿಕಲ್ ನೀಟ್ ಪರೀಕ್ಷೆಗೆ ಹೊರಟಿರುವ ವಿದ್ಯಾರ್ಥಿನಿಯರುImage Credit source: PTI
ನವದೆಹಲಿ, ಆಗಸ್ಟ್ 9: ದೇಶದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಮತ್ತು ವೈದ್ಯಕೀಯ ಶಿಕ್ಷಣ ಬಲಪಡಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2028-29ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ 5,000 ಹೆಚ್ಚುವರಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು (Medical PG seats) ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಅವರು ಲೋಕಸಭೆಗೆ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಇರುವ ಸೀಟುಗಳ ಸಂಖ್ಯೆ?
ಆರೋಗ್ಯ ಸಚಿವರು ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಭಾರತದಲ್ಲಿ ಒಟ್ಟು 86,360 ಪಿಜಿ ವೈದ್ಯಕೀಯ ಸೀಟುಗಳು ಲಭ್ಯವಿವೆ. ಇವುಗಳ ಜೊತೆ ಇನ್ನೆರಡು ವರ್ಷದಲ್ಲಿ ಮತ್ತಷ್ಟು 5,000 ಸೀಟುಗಳು ಸೇರ್ಪಡೆಯಾಗಲಿವೆ. ಇದರೊಂದಿಗೆ ಒಟ್ಟು ಮೆಡಿಕಲ್ ಪಿಜಿ ಸೀಟುಗಳ ಸಂಖ್ಯೆ ಇನ್ನೆರಡು ವರ್ಷದಲ್ಲಿ 90 ಸಾವಿರ ದಾಟಲಿದೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಪಿಜಿ ಸಂಸ್ಥೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ‘ಕೇಂದ್ರ ಪ್ರಾಯೋಜಿತ ಯೋಜನೆ’ಯ 3ನೇ ಹಂತದಡಿ (Phase-III) ಈ ಹೊಸ ಸೀಟುಗಳನ್ನು ಸೃಷ್ಟಿಸಲಾಗುತ್ತಿದೆ.
ಆರ್ಥಿಕ ನೆರವು ಹೆಚ್ಚಳ: ಹೊಸ ಸೀಟುಗಳ ನಿರ್ಮಾಣಕ್ಕೆ ನೀಡುವ ಆರ್ಥಿಕ ಅನುದಾನವನ್ನು ಸರ್ಕಾರ ಹೆಚ್ಚಿಸಿದ್ದು, ಪ್ರತಿ ಸೀಟಿಗೆ ಗರಿಷ್ಠ ₹1.50 ಕೋಟಿ ವೆಚ್ಚದ ಸೀಲಿಂಗ್‌ಗೆ ಏರಿಸಿದೆ.
ಕರ್ನಾಟಕದಲ್ಲೇ ಅತಿಹೆಚ್ಚು ಪಿಜಿ ಸೀಟುಗಳು
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿರುವ 86,360 ಮೆಡಿಕಲ್ ಪಿಜಿ ಸೀಟುಗಳ ಪೈಕಿ ಅತಿಹೆಚ್ಚು ಸೀಟುಗಳಿರುವುದು ಕರ್ನಾಟಕದಲ್ಲೇ. ಈ ರಾಜ್ಯದಲ್ಲಿ 10,092 ಸೀಟುಗಳಿವೆ ಎನ್ನಲಾಗಿದೆ. ಇದರಲ್ಲಿ ಸರ್ಕಾರಿ ಸೀಟುಗಳು 2,805 ಇದ್ದರೆ, ಖಾಸಗಿ ಸೀಟುಗಳು 7,287 ಇದೆ. ಅತಿಹೆಚ್ಚು ವೈದ್ಯಕೀಯ ಸ್ನಾತಕೋತ್ತರ ಸೀಟುಗಳನ್ನು ಹೊಂದಿರುವ ಟಾಪ್-3 ರಾಜ್ಯಗಳು ಈ ಕೆಳಕಂಡಂತಿವೆ:
- ಕರ್ನಾಟಕ: 10,092 ಸೀಟುಗಳು
- ಮಹಾರಾಷ್ಟ್ರ: 9,216 ಸೀಟುಗಳು
- ತಮಿಳುನಾಡು: 8,023 ಸೀಟುಗಳು
ಈ ಯೋಜನೆಯು ನೀಟ್-ಪಿಜಿ (NEET-PG) ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿದ್ದು, ಗ್ರಾಮೀಣ ಹಾಗೂ ಸಣ್ಣ ನಗರಗಳಲ್ಲಿ ತಜ್ಞ ವೈದ್ಯರ ಲಭ್ಯತೆಯನ್ನು ಹೆಚ್ಚಿಸಲಿದೆ.
ಇದನ್ನೂ ಓದಿ: ಹೈದರಾಬಾದ್ ನಲ್ಸಾರ್ ಕಾನೂನು ವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸಿಜೆಐ ಮುಖ್ಯ ಅತಿಥಿಯಾಗಲು ವಿದ್ಯಾರ್ಥಿಗಳಿಂದ ವಿರೋಧ
ಎಂಬಿಬಿಎಸ್ (MBBS) ಸೀಟುಗಳೂ ಹೆಚ್ಚಳ: ಪಿಜಿ ಸೀಟುಗಳ ಜೊತೆಗೆ ಯೋಜನೆ ಭಾಗವಾಗಿ 5,023 ಹೊಸ ಎಂಬಿಬಿಎಸ್ ಸೀಟುಗಳನ್ನು ಸಹ ಹಂತ ಹಂತವಾಗಿ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಸದ್ಯ ಭಾರತದಾದ್ಯಂತ ಇರುವ 823 ಮೆಡಿಕಲ್ ಕಾಲೇಜುಗಳಲ್ಲಿ ಒಟ್ಟು 1,36,939 ಎಂಬಿಬಿಎಸ್ ಪದವಿ ಸೀಟುಗಳಿವೆ. ಇದರಲ್ಲಿ ಸರ್ಕಾರಿ ಸೀಟುಗಳ ಸಂಖ್ಯೆ 63,296 ಇದೆ. ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲೂ ಕರ್ನಾಟಕ ನಂಬರ್ ಒನ್ ಇದೆ. ಉತ್ತರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ಬರುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 7:40 pm, Sun, 9 August 26
