ಸನಾತನ ಧರ್ಮ ಕಿತ್ತೊಗೀಬೇಕೆಂದಿದ್ದ ಉದಯನಿಧಿ ಸ್ಟಾಲಿನ್ ಹೆಸರಲ್ಲೇ ಚಾಮುಂಡೇಶ್ವರಿ, ನಿಮಿಷಾಂಬಾಗೆ ದುರ್ಗಾ ಸ್ಟಾಲಿನ್ ಪೂಜೆ!

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ದುರ್ಗಾ ಸ್ಟಾಲಿನ್Image Credit source: tv9

ಮೈಸೂರು, ಜೂನ್ 2: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಪತ್ನಿ ದುರ್ಗಾ ಸ್ಟಾಲಿನ್ (Durga Stalin) ಅವರು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udayanidhi Stalin) ಅವರ ತಾಯಿಯೇ ಈಗ ಮಗ ಹಾಗೂ ಪತಿಯ ಹೆಸರಿನಲ್ಲಿ ಶಕ್ತಿ ದೇವತೆಗಳಿಗೆ ಅರ್ಚನೆ ಮಾಡಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಮಂಡ್ಯದ ಗಂಜಾಂನ ನಿಮಿಷಾಂಬಾ ದೇವಸ್ಥಾನಕ್ಕೆ ತಮಿಳುನಾಡು ಮಾಜಿ ಸಿಎಂ ಎಂಕೆ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಭೇಟಿ.
  • ಸನಾತನ ಧರ್ಮ ವಿರೋಧಿಸಿದ್ದ ಪುತ್ರ ಉದಯನಿಧಿ ಸ್ಟಾಲಿನ್ ಹೆಸರಿನಲ್ಲಿ ತಾಯಿಯಿಂದ ದೇವಿಗೆ ವಿಶೇಷ ಅರ್ಚನೆ ಮತ್ತು ಮಡಿಲು ತುಂಬಿಸುವ ಉಡಿಸೇವೆ ಸಲ್ಲಿಕೆ.
  • ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ದಂಪತಿಯ ಆಶೀರ್ವಾದ ಪಡೆದ ದುರ್ಗಾ.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ‘ಸನಾತನ ಧರ್ಮ ಎಂಬುದು ಸೊಳ್ಳೆ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ಕೇವಲ ವಿರೋಧಿಸಿದರೆ ಸಾಲದು, ಸಮಾಜದಿಂದ ಸಂಪೂರ್ಣವಾಗಿ ಕಿತ್ತೊಗೆಯಬೇಕು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿತ್ತು ಮತ್ತು ಹಿಂದೂ ಧರ್ಮೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಚಾಮುಂಡೇಶ್ವರಿ ದೇಗುಲದಲ್ಲಿ ದುರ್ಗಾ ಸ್ಟಾಲಿನ್

ಮಗ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸನಾತನ ಧರ್ಮವನ್ನು ವಿರೋಧಿಸಿದ್ದರೂ, ತಾಯಿ ದುರ್ಗಾ ಸ್ಟಾಲಿನ್ ಮಾತ್ರ ತಮ್ಮ ಧಾರ್ಮಿಕ ನಂಬಿಕೆಯನ್ನು ಮುಂದುವರಿಸಿದ್ದಾರೆ. ಮಗನ ಒಳಿತಿಗಾಗಿ ಹಾಗೂ ಕುಟುಂಬದ ಸುಖ-ಶಾಂತಿಗಾಗಿ ಅವರು ಹಿಂದೂ ಸಂಪ್ರದಾಯದಂತೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಮಗನ ಹೇಳಿಕೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ದೇವಸ್ಥಾನಗಳಲ್ಲಿ ಉಡಿಸೇವೆ ಮತ್ತು ವಿಶೇಷ ಪೂಜೆ


ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಪ್ರಸಿದ್ಧ ನಿಮಿಷಾಂಬಾ ದೇವಸ್ಥಾನಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರ ಪುತ್ರಿ ಮತ್ತು ಅಳಿಯನೊಂದಿಗೆ ಭೇಟಿ ನೀಡಿದ ದುರ್ಗಾ ಸ್ಟಾಲಿನ್, ಸುಮಾರು 30 ನಿಮಿಷಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ದೇವಿಗೆ ರೇಷ್ಮೆ ಸೀರೆ, ಗಾಜಿನ ಬಳೆಗಳು ಹಾಗೂ ಹೂ-ಹಣ್ಣುಗಳನ್ನು ಅರ್ಪಿಸುವ ಮೂಲಕ ಸಾಂಪ್ರದಾಯಿಕ ‘ಮಡಿಲು ತುಂಬಿಸುವ’ ಉಡಿಸೇವೆಯನ್ನು ನೆರವೇರಿಸಿದರು. ಈ ವೇಳೆ ಪತಿ ಎಂ.ಕೆ. ಸ್ಟಾಲಿನ್ ಹಾಗೂ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು.

ಇದನ್ನೂ ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಪುತ್ರ ಉದಯನಿಧಿ

ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ದುರ್ಗಾ ಸ್ಟಾಲಿನ್, ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿದರು. ಧಾರ್ಮಿಕ ದರ್ಶನದ ಬಳಿಕ ಮೈಸೂರಿನಲ್ಲಿರುವ ಶಾಸಕ ಜಿ.ಟಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಜಿ.ಟಿ.ಡಿ ಪತ್ನಿ ಲಲಿತಾ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಟಿ. ದೇವೇಗೌಡ ದಂಪತಿಯ ಕಾಲು ಮುಟ್ಟಿ ಆಶೀರ್ವಾದ ಪಡೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *