ನವದೆಹಲಿ, ಆಗಸ್ಟ್ 15: ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ (Independence Day 2026) ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ‘ಸಪ್ತಧಾರಾ’ ಸುಧಾರಣೆಗಳನ್ನು ಘೋಷಿಸಿದ್ದಾರೆ. ಉತ್ಪಾದನೆ, ಕೃಷಿ, ತಂತ್ರಜ್ಞಾನ, ಗತಿ ಶಕ್ತಿ, ರಕ್ಷಣೆ, ಹಸಿರು ಇಂಧನ ಮತ್ತು ಸಾಫ್ಟ್ ಪವರ್‌ಗಳನ್ನು ಭಾರತದ ಭವಿಷ್ಯವನ್ನು ರೂಪಿಸುವ 7 ಶಕ್ತಿಯ ಧಾರೆಗಳೆಂದು ಪ್ರಧಾನಿ ಗುರುತಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಾಚೀನ ಕಾಲದ ‘ಸಪ್ತ ಸಿಂಧು’ (7 ನದಿಗಳು) ಪರಿಕಲ್ಪನೆಯನ್ನು ಉಲ್ಲೇಖಿಸುತ್ತಾ, ಭಾರತದ ಅಭಿವೃದ್ಧಿಯ ಪಯಣವನ್ನು ಮುನ್ನಡೆಸಲು ಹೊಸ ಶಕ್ತಿಯ ಧಾರೆಗಳ ಅಗತ್ಯವಿದೆ ಎಂದು ಹೇಳಿದರು.
ಉತ್ಪಾದನೆ (Manufacturing):
ಉತ್ಪಾದನಾ ಕ್ಷೇತ್ರವನ್ನು ಭಾರತದ ಮುಂದಿನ ಪ್ರಗತಿಯ ಪಯಣದ ಅಡಿಪಾಯ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಈ ವಲಯದ ಬೃಹತ್ ವಿಸ್ತರಣೆಗೆ ಕರೆ ನೀಡಿದರು. ಭಾರತವು ಕೇವಲ ಬಿಡಿಭಾಗಗಳನ್ನು ತಯಾರಿಸುವುದಕ್ಕೆ ಸೀಮಿತವಾಗದೆ, ಸಂಪೂರ್ಣ ಸಿದ್ಧ ಉತ್ಪನ್ನಗಳನ್ನು (ತಯಾರಿಸುವುದರತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು. ಜಾಗತಿಕ ಪೂರೈಕೆ ಸರಣಿಯಲ್ಲಿ ಭಾರತವನ್ನು ಪ್ರಮುಖ ಆಟಗಾರನನ್ನಾಗಿ ಮಾಡಬೇಕಾದ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, ವೆಚ್ಚ, ಗುಣಮಟ್ಟ ಮತ್ತು ಪ್ರಮಾಣ ಎಂಬ ಮೂರು ನಿರ್ಣಾಯಕ ಅಂಶಗಳತ್ತ ಗಮನ ಹರಿಸುವಂತೆ ಉತ್ಪಾದಕರಿಗೆ ಮನವಿ ಮಾಡಿದರು.
ಕೃಷಿ ಮತ್ತು ಆಹಾರ ಭದ್ರತೆ (Agriculture and Food Security):
ಸಪ್ತಧಾರಾದ ಎರಡನೇ ಸ್ತಂಭ ಕೃಷಿ ಮತ್ತು ಆಹಾರ ಉತ್ಪಾದನೆಯಾಗಿದೆ. ಭಾರತದ ಅಭಿವೃದ್ಧಿಯ ಪಯಣದಲ್ಲಿ ಕೃಷಿ ವಲಯದ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಮೋದಿ, ಆಹಾರ ಮತ್ತು ಕೃಷಿಯು ದೇಶದ ಆರ್ಥಿಕ ಪ್ರಗತಿಯ ಕೇಂದ್ರಬಿಂದುವಾಗಿ ಮುಂದುವರಿಯಲಿದೆ ಎಂದರು. ದೀರ್ಘಕಾಲದ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೃಷಿ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಇದನ್ನೂ ಓದಿ: Red Fort: ಪ್ರತಿ ವರ್ಷ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲೇ ಏಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ?
ತಂತ್ರಜ್ಞಾನ ಮತ್ತು ನಾವೀನ್ಯತೆ (Technology and Innovation):
ತಂತ್ರಜ್ಞಾನ ಮತ್ತು ನಾವೀನ್ಯತೆಯು ಭಾರತದ ಪ್ರಗತಿಯ ತಂತ್ರಜ್ಞಾನ ಆಧಾರಿತ ಮೂರನೇ ಧಾರೆಯಾಗಿದೆ. ಪ್ರಪಂಚವು ಡಾಟಾ ಸೆಂಟರ್‌ಗಳು, ರೊಬೊಟಿಕ್ಸ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಯುಗವನ್ನು ಪ್ರವೇಶಿಸುತ್ತಿದ್ದು, ಭಾರತವು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿ ತನ್ನನ್ನು ತಾನು ರೂಪಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು. ಇದೇ ವೇಳೆ ಯುಪಿಐ (UPI) ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತವು ಈಗಾಗಲೇ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ಈಗ ಮತ್ತಷ್ಟು ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು ಎಂದರು. ಮುಂದಿನ ಪೀಳಿಗೆಯ ದೂರಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಯನ್ನು ವೇಗಗೊಳಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, ಭಾರತದಲ್ಲೇ ತಯಾರಾಗುವ ‘ಮೇಡ್ ಇನ್ ಇಂಡಿಯಾ’ 6ಜಿ (6G) ತಂತ್ರಜ್ಞಾನವು ದೇಶದ ಪ್ರತಿಯೊಂದು ಮೂಲೆಗೂ ತಲುಪಬೇಕು ಎಂದು ಕರೆ ನೀಡಿದರು.
ಗತಿ ಶಕ್ತಿ (Gati Shakti):
ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಯು ಸಪ್ತಧಾರಾದ ನಾಲ್ಕನೇ ಧಾರೆಯಾಗಿದೆ. ವ್ಯಾಪಾರವನ್ನು ಉತ್ತೇಜಿಸಲು, ಲಾಜಿಸ್ಟಿಕ್ಸ್ ಸುಧಾರಿಸಲು ಮತ್ತು ಉದ್ದಿಮೆಗಳನ್ನು ಬಲಪಡಿಸಲು ರಸ್ತೆಗಳು, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಗೆ ಹೆಚ್ಚಿನ ಆದ್ಯತೆ ನೀಡುವುದನ್ನು ಮುಂದುವರಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ಅತಿವೇಗದ ಸಂಪರ್ಕವು ಆರ್ಥಿಕ ಅವಕಾಶಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ಭಾರತದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ರಕ್ಷಾ ಶಕ್ತಿ (Raksha Shakti):
ಐದನೇ ಸ್ತಂಭವು ರಕ್ಷಣೆ ಮತ್ತು ಮಿಲಿಟರಿ ಸ್ವಾವಲಂಬನೆಯ ಮೇಲೆ ಗಮನ ಹರಿಸುತ್ತದೆ. ಭಾರತವು ದೇಶೀಯ ರಕ್ಷಣಾ ಉತ್ಪಾದನೆಯನ್ನು ಬಲಪಡಿಸಬೇಕು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದು ಮೋದಿ ಹೇಳಿದರು. ಡ್ರೋನ್ ಮತ್ತು ಕೌಂಟರ್-ಡ್ರೋನ್ ವ್ಯವಸ್ಥೆಗಳು ಸೇರಿದಂತೆ ಉದಯೋನ್ಮುಖ ಮಿಲಿಟರಿ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗೆ ಕರೆ ನೀಡಿದರು. ಪ್ರಧಾನಿಯವರ ಪ್ರಕಾರ, ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ‘ಆತ್ಮನಿರ್ಭರ ರಕ್ಷಣಾ ವಲಯ’ ಅತ್ಯಂತ ಅತ್ಯಗತ್ಯವಾಗಿದೆ.
ಇದನ್ನೂ ಓದಿ: 80ನೇ ಸ್ವಾತಂತ್ರ್ಯ ದಿನಾಚರಣೆ: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಥಮ ಬಾರಿಗೆ ಮೊಳಗಿದ ‘ವಂದೇ ಮಾತರಂ’
ಹಸಿರು ಇಂಧನ (Green Energy and Blue Economy):
ಹಸಿರು ಇಂಧನವನ್ನು ಭಾರತದ ಪ್ರಗತಿಯ ಮಾದರಿಯ ಆರನೇ ಧಾರೆಯನ್ನಾಗಿ ಗುರುತಿಸಲಾಗಿದೆ. ಪರಿಸರ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸಲು ಸ್ವಚ್ಛ ಇಂಧನ ತಂತ್ರಜ್ಞಾನಗಳಲ್ಲಿ ನಾವೀನ್ಯತೆ (ಇನೋವೇಶನ್) ಅಗತ್ಯ ಎಂದು ಮೋದಿ ಹೇಳಿದರು. ನವೀಕರಿಸಬಹುದಾದ ಇಂಧನ ವಲಯವನ್ನು ವಿಸ್ತರಿಸಲು ಮತ್ತು ಸ್ವಚ್ಛ ಇಂಧನ ಮೂಲಗಳತ್ತ ವೇಗವಾಗಿ ಸಾಗಲು ಹೆಚ್ಚಿನ ಶ್ರಮ ವಹಿಸುವಂತೆ ಅವರು ಕರೆ ನೀಡಿದರು.
“ಭಾರತವು ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂಗ್ರಹಣೆಯಲ್ಲಿ ಜಾಗತಿಕ ನಾಯಕತ್ವವನ್ನು ಸಾಧಿಸಬೇಕು.” ಇದೇ ವೇಳೆ ಮೀನುಗಾರಿಕೆ, ಕರಾವಳಿ ಪ್ರವಾಸೋದ್ಯಮ ಮತ್ತು ಸಾಗರ ತಂತ್ರಜ್ಞಾನದಲ್ಲಿ ಅತ್ಯಂತ ಹೆಚ್ಚಿನ ಅವಕಾಶಗಳನ್ನು ನೀಡುವ ‘ಬ್ಲೂ ಎಕಾನಮಿ’ (ಸಾಗರ ಆರ್ಥಿಕತೆ) ಭಾರತದ ಪ್ರಗತಿಗೆ ಹೊಸ ಹಾದಿಗಳನ್ನು ತೆರೆಯುತ್ತದೆ ಎಂದರು.
ಸಾಫ್ಟ್ ಪವರ್ (Soft Power):
ಸಪ್ತಧಾರಾದ ಅಂತಿಮ ಸ್ತಂಭ ಭಾರತದ ಸಾಫ್ಟ್ ಪವರ್ ಆಗಿದೆ. ಭಾರತದ ಸಾಂಸ್ಕೃತಿಕ ಪ್ರಭಾವವು ಅದರ ಗಡಿಗಳನ್ನು ಮೀರಿ ವಿಸ್ತರಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ, ಯೋಗ, ಕರಕುಶಲ ವಸ್ತುಗಳು, ಚಲನಚಿತ್ರಗಳು, ಅನಿಮೇಷನ್, ಗೇಮಿಂಗ್, ಡಿಜಿಟಲ್ ಕಂಟೆಂಟ್ ಮತ್ತು ಸೃಜನಶೀಲ ರಂಗವನ್ನು ದೇಶದ ಸಾಫ್ಟ್ ಪವರ್‌ನ ಪ್ರಮುಖ ಭಾಗಗಳೆಂದು ಉಲ್ಲೇಖಿಸಿದರು. ಭಾರತದ ಬೃಹತ್ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬೆಟ್ಟು ಮಾಡಿದ ಅವರು, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ದೇಶವು ಇನ್ನಷ್ಟು ಕೆಲಸ ಮಾಡಬೇಕಾಗಿದೆ ಎಂದರು.
ಪ್ರಧಾನಮಂತ್ರಿ ಮೋದಿ ಪ್ರಕಾರ, ಈ 7 ಧಾರೆಗಳು ಭಾರತದ ಆರ್ಥಿಕತೆಯನ್ನು ಬಲಪಡಿಸುವುದು ಮಾತ್ರವಲ್ಲದೆ, 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ. “ಕಳೆದ 5 ರಿಂದ 7 ದಶಕಗಳಲ್ಲಿ ಸಾಧಿಸಲು ಸಾಧ್ಯವಾಗದಿದ್ದನ್ನು, ಮುಂಬರುವ 5ರಿಂದ 7 ವರ್ಷಗಳಲ್ಲಿ ಈ ಸಪ್ತಧಾರಾದ ಶಕ್ತಿ ಮತ್ತು ಪರಾಕ್ರಮದ ಮೂಲಕ ಸಾಧಿಸಲಿದ್ದೇವೆ. ನಾವು ದೇಶಕ್ಕೆ ಹೊಸ ಎತ್ತರ, ಹೊಸ ವೇಗ ಮತ್ತು ಹೊಸ ಗುರಿಗಳನ್ನು ಮೀರಿ ಬೆಳೆಯುವ ಸಾಮರ್ಥ್ಯವನ್ನು ನೀಡಲಿದ್ದೇವೆ” ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
