ಹಾಸನ, (ಆಗಸ್ಟ್ 08): ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ (Cabinet Expansion) ಬೆನ್ನಲ್ಲೇ ಕಾಂಗ್ರೆಸ್ನಲ್ಲಿ (Karnataka Congress) ಅಸಮಧಾನ ಸ್ಫೋಟಗೊಂಡಿದೆ. ಮಂತ್ರಿ ಸ್ಥಾನ ಸಿಗದ ಶಾಸಕರು ಪಕ್ಷದ ನಡೆಗೆ ಬೇಸರಗೊಂಡಿದ್ದು, ಇದೀಗ ಅವರನ್ನು ಸಮಾಧಾನಪಡಿಸಲು ಸಿಎಂ ಡಿಕೆ ಶಿವಕುಮಾರ್ (DK Shivakumar), ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮನೆ ಮನೆಗೆ ತೆರಳಿ ಮಾತುಕತೆ ಮೂಲಕ ಮನವೊಲಿಸುವ ಯತ್ನ ನಡೆಸಿದ್ದಾರೆ. ಇದರ ಮಧ್ಯೆ ಇತ್ತ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ ಅಸಮಧಾನಿತ ಶಾಸಕರಿಗೆ ಗಾಳ ಹಾಕಿದ್ದು, ಜೆಡಿಎಸ್ಗೆ ಬರುವಂತೆ ಓಪನ್ ಆಫರ್ ನೀಡಿದ್ದಾರೆ.
ಈ ಬಗ್ಗೆ ಹಾಸನದ ಹರದನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷ ನೊಂದವರಿಗೆ, ನೋವಿನಲ್ಲಿರುವವರಿಗೆ ಹಾಗೂ ಸಮಸ್ಯೆಯಲ್ಲಿದ್ದವರಿಗೆ ಪರಿಹಾರ ಕೊಡುವ ಪಕ್ಷ. ನೋವಿನಲ್ಲಿರುವವರಿಗೆ ಜೆಡಿಎಸ್ ಪಕ್ಷದ ಬಾಗಿಲು ತೆರೆದಿರುತ್ತೆ. ನೋವಿಗೆ ಪರಿಹಾರನೂ ದೊರಕುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕರಿಗೆ ಬಹಿರಂಗ ಆಫರ್ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕಾಮಗ್ರೆಸ್ ಶಾಸಕರು ಜೆಡಿಎಸ್ನತ್ತ ಮುಖ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
