ಮಂಗಳೂರು, ತುಂಬೆ ವೆಂಟೆಡ್ ಡ್ಯಾಂImage Credit source: tv9 kannada
ಮಂಗಳೂರು, ಏಪ್ರಿಲ್ 25: ರಾಜ್ಯದಲ್ಲಿ ಕುಡಿಯುವ ನೀರಿಗೆ (drinking water) ಬರ ಎದುರಾಗಿದೆ. ಕಡಲನಗರಿ ಮಂಗಳೂರಿನಲ್ಲೂ (mangaluru) ನೀರಿನ ಕೊರತೆ ಕಂಡುಬಂದಿದೆ. ನಗರಕ್ಕೆ ನೀರು ಪೊರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿತವಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಎರಡು ದಿನಕ್ಕೊಮ್ಮೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಿರ್ಧಾರ ಮಾಡಿದೆ.
ಕರಾವಳಿಯಲ್ಲಿ ಸದ್ಯ ಬಿಸಿಲ ಝಳ ಹೆಚ್ಚುತ್ತಿದೆ. ಬೇಸಿಗೆಯ ಬೇಗೆಯಿಂದ ಜನ ಮನೆಯಿಂದ ಹೊರ ಬರುವುದಕ್ಕೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ತಾಪಮಾನ ಏರಿಕೆಯಿಂದಾಗಿ ಬಾವಿ, ನದಿಗಳಲ್ಲೂ ನೀರು ಬತ್ತಿ ಹೋಗಿದೆ. ಅದರಲ್ಲೂ ಕರಾವಳಿಯ ಜೀವನದಿ ನೇತ್ರಾವತಿಯ ಒಡಲಲ್ಲಿ ನೀರಿನ ಮಟ್ಟ ಸಾಕಷ್ಟು ಕುಸಿದಿದೆ. ಹೀಗಾಗಿ ಮಂಗಳೂರು ನಗರಕ್ಕೆ ನೀರು ಪೂರೈಸುತ್ತಿರುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲೂ ನೀರಿಗೆ ಬರಬಂದಿದೆ.
ಮೇ 1ರಿಂದ ಎರಡು ದಿನಕ್ಕೊಮ್ಮೆ ನೀರು
ಡ್ಯಾಮ್‌ನಲ್ಲಿ ನೀರಿನ ಮಟ್ಟ 4.53 ಮೀಟರ್‌ಗೆ ಇಳಿಕೆಯಾಗಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ನಗರಕ್ಕೆ ಮೇ 1ರಿಂದ ಎರಡು ದಿನಕ್ಕೊಮ್ಮೆ ನೀರಿನ ಸರಬರಾಜು ಮಾಡುವ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಮೀನುಗಾರಿಕೆಗೆ ತಟ್ಟಿದ ತಾಪಮಾನ ಬಿಸಿ: ಮತ್ಸ್ಯಕ್ಷಾಮ, ಮೀನುಗಾರಿಕೆ ಸ್ಥಗಿತಗೊಳಿಸಿ ದಡ ಸೇರಿದ ಸಾವಿರಾರು ಬೋಟ್‌ಗಳು!
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಐದೂವರೆ ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ತುಂಬೆ ಡ್ಯಾಂನಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಂಗಳೂರು ನಗರಕ್ಕೆ ಪ್ರತಿ ದಿನ ಸುಮಾರು 160 ಎಂಎಲ್ಡಿ ನೀರನ್ನು ಪಂಪಿಂಗ್ ಮಾಡಲಾಗುತ್ತೆ. ಸದ್ಯ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ಮಾಡುವುದರಿಂದ ನಿತ್ಯ ಸುಮಾರು 40ರಿಂದ 50 ಎಂಎಲ್ಡಿ ನೀರು ಉಳಿಕೆಯಾಗಲಿದೆ.
ಗಾರ್ಡನಿಂಗ್, ವಾಹನ ತೊಳೆಯುವುದಕ್ಕೆ ನೀರು ಬಳಸುವಂತ್ತಿಲ್ಲ
ಸದ್ಯ ಎಎಂಆರ್ ಮತ್ತು ಬಿಳಿಯೂರು ಡ್ಯಾಂನಲ್ಲಿರುವ ನೀರಿನ ಸಂಗ್ರಹದ ಲೆಕ್ಕಚಾರದಂತೆ ಜೂನ್ ಮೊದಲ ವಾರದವರೆಗೆ ಕುಡಿಯುವ ನೀರಿನ ಪೂರೈಕೆಯನ್ನು ಮ್ಯಾನೇಜ್ ಮಾಡಬಹುದಾಗಿದೆ. ಇದರ ಜೊತೆ ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದಲ್ಲಿರುವ ನೀರನ್ನು ಸಹ ಡ್ಯಾಂಗೆ ಮತ್ತೆ ಪಂಪಿಂಗ್ ಮಾಡಬಹುದಾಗಿದೆ. ಹೀಗಾಗಿ ನೀರನ್ನು ಗಾರ್ಡನಿಂಗ್‌ಗೆ, ವಾಹನ ತೊಳೆಯುವುದಕ್ಕೆ ಬಳಸದಂತೆ ಪಾಲಿಕೆ ಸೂಚನೆ ನೀಡಿದೆ.
ಇದನ್ನೂ ಓದಿ: ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿಬಿದ್ದು ಅವಘಡ, ವಿಡಿಯೋ ವೈರಲ್
ಜೂನ್ ಮೊದಲ ವಾರದೊಳಗೆ ಮುಂಗಾರು ಬಂದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಹೀಗಾಗಿ ಶೀಘ್ರ ವರುಣ ದೇವ ಕೃಪೆ ತೋರಲಿ ಎಂಬ ಪ್ರಾರ್ಥನೆ ಎಲ್ಲರದ್ದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
