ಸರ್ಕಾರಿ ಆಸ್ಪತ್ರೆಯಲ್ಲೇ ರೋಗಿಗಳಿಗೆ ನರಕಯಾತನೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ, ರೋಗಿಗಳ ಪರದಾಟ – Kannada News | ICU Bed Shortage at Victoria Hospital Bengaluru Sparks Outcry; Patients Struggle Amid Emergency Crisis

ವಿಕ್ಟೋರಿಯಾ ಆಸ್ಪತ್ರೆ ಹಾಗೂ ಐಸಿಯು ಬೆಡ್​ಗಳ ಸಾಂದರ್ಭಿಕ ಚಿತ್ರImage Credit source: tv9

ಬೆಂಗಳೂರು, ಫೆಬ್ರವರಿ 26: ಅದು ಹೇಳಿಕೊಳ್ಳಲು ಬೆಂಗಳೂರು (Bengaluru) ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ. ಆದರೆ, ಚಿಕಿತ್ಸೆಗೆ ಬಂದರೆ ಜೀವಕ್ಕೆ ಗ್ಯಾರಂಟಿ ಇಲ್ಲ ಎಂಬಂಥ ಸ್ಥಿತಿ ಇದೆ. ಗ್ಯಾರಂಟಿಗಳನ್ನು ಕೊಟ್ಟಿರುವ ಸರ್ಕಾರದಿಂದ ಆರೋಗ್ಯ ಭಾಗ್ಯದ ಗ್ಯಾರಂಟಿಯೇ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಅವ್ಯವಸ್ಥೆಗಳ ಸಂಬಂಧ ಆರೋಪ ಈಗೀಗ ಜೋರಾಗಿಯೇ ಕೇಳಿಬರುತ್ತಿದೆ. ಸಮಸ್ಯೆಗಳು ತಾಂಡವ ಆಡುತ್ತಿದ್ದು, ರೋಗಿಗಳು ಎಮರ್ಜೆನ್ಸಿ ಎಂದು ಬಂದರೆ ಬೆಡ್ ಇಲ್ಲ ಎನ್ನುವ ಸ್ಥಿತಿ ಇದೆ.

ಆಸ್ಪತ್ರೆಗೆ ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ನೂರಾರು ರೋಗಿಗಳು ಆಗಮಿಸುತ್ತಾರೆ. ಆದರೆ ಲಭ್ಯವಿರುವ ಐಸಿಯು ಬೆಡ್‌ಗಳ ಸಂಖ್ಯೆ ಕೇವಲ 60ರಿಂದ 70 ಮಾತ್ರ. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ. ಎಮರ್ಜೆನ್ಸಿ ವಿಭಾಗದಲ್ಲಿಯೂ ಒತ್ತಡ ಹೆಚ್ಚಿದ್ದು, ಕೆಲವು ಸಂದರ್ಭಗಳಲ್ಲಿ ಖಾಲಿ ಬೆಡ್ ಇಲ್ಲ ಎಂಬ ಕಾರಣ ನೀಡಿ ಕಾಯುವಂತೆ ಸೂಚಿಸಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಕೆಲವರು ರೋಗಿಗಳ ಸಂಬಂಧಿಕರು, ಸಮಸ್ಯೆ ತಿಳಿಸಲು ಹೋದಾಗ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬೆಡ್ ಸಿಗದ ಹಿನ್ನೆಲೆ ಕೆಲವು ಕುಟುಂಬಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನಲಾಗಿದೆ. ಲ್ಯಾಬ್ ಪರೀಕ್ಷಾ ವರದಿಗಳು ತಡವಾಗಿ ದೊರಕುವುದು ಸೇರಿದಂತೆ ಇನ್ನೂ ಹಲವು ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತವಾಗುತ್ತಿದೆ.

ವೈದ್ಯಕೀಯ ಅಧೀಕ್ಷಕರು ಹೇಳಿದ್ದೇನು?

ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಅಧೀಕ್ಷಕರು, ‘ವಿಕ್ಟೋರಿಯಾ ಆಸ್ಪತ್ರೆ ದೊಡ್ಡ ಪ್ರಮಾಣದಲ್ಲಿ ರೋಗಿಗಳಿಗೆ ಸೇವೆ ನೀಡುತ್ತಿದೆ. ದಿನನಿತ್ಯ ಬಹಳ ಸಂಖ್ಯೆಯಲ್ಲಿ ತುರ್ತು ಪ್ರಕರಣಗಳು ಬರುತ್ತಿವೆ. ಲಭ್ಯವಿರುವ ಐಸಿಯು ಬೆಡ್‌ಗಳು ಸೀಮಿತವಾಗಿವೆ. ಈ ಕುರಿತು ಸರ್ಕಾರದ ಗಮನಕ್ಕೆ ವಿಷಯವನ್ನು ತರಲಾಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್! ರೋಗಿಗಳ ಪರದಾಟ

ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಈ ಆಸ್ಪತ್ರೆಯಲ್ಲಿ ಮೂಲಸೌಕರ್ಯ ವೃದ್ಧಿ ಮತ್ತು ಹೆಚ್ಚುವರಿ ಐಸಿಯು ಬೆಡ್‌ಗಳ ವ್ಯವಸ್ಥೆ ಅಗತ್ಯವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಆರೋಗ್ಯ ಸೇವೆ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *