ಸರ್ಕಾರಿ ಕೆಲಸದ ಹೆಸರಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಮಕ್ಮಲ್ ಟೋಪಿ: ಕೋಟ್ಯಂತರ ರೂ ವಂಚನೆ – Kannada News | Massive Job Scam Uncovered: Aspirants Duped of 2 Crore

ಶಿವಮೊಗ್ಗ, ಜುಲೈ 02: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ (job scam) ಮಾಡಿರುವ ಜೋಡಿಯನ್ನು ನಗರದ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ (shivamogga) ಹರಿಗೆ ಗ್ರಾಮದ ನಿವಾಸಿಗಳಾದ ಸಚಿನ್ ಮತ್ತು ಸುಜಾತ ಬಂಧಿತ ಆರೋಪಿಗಳು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿವಿಧ ಜಿಲ್ಲೆಗಳ ನೂರಾರು ನಿರುದ್ಯೋಗಿಗಳಿಗೆ ಟೋಪಿ 

ವಂಚಕರು ಶಿವಮೊಗ್ಗ ನಗರದಲ್ಲಿ ಹೈಟೆಕ್ ಉದ್ಯೋಗ ತರಬೇತಿ ಕೇಂದ್ರವನ್ನು ತೆರೆದಿದ್ದರು. ಕೇವಲ ಶಿವಮೊಗ್ಗ ಮಾತ್ರವಲ್ಲದೆ ಹಾಸನ, ದಾವಣಗೆರೆ, ಚಿಕ್ಕಮಗಳೂರು ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಟೋಪಿ ಹಾಕಿದ್ದಾರೆ.

ಒಬ್ಬೊಬ್ಬರಿಂದ 10 ಲಕ್ಷದವರೆಗೆ ವಸೂಲಿ

ಸರಕಾರಿ ಕೆಲಸದ ಆಸೆಗೆ ಬಿದ್ದ ಉದ್ಯೋಗ ಆಕಾಂಕ್ಷಿಗಳಿಂದ ಈ ವಂಚಕರು ಒಬ್ಬೊಬ್ಬರಿಂದ ಕನಿಷ್ಠ 3.5 ಲಕ್ಷ ರೂ ಹಿಡಿದು 10 ಲಕ್ಷ ರೂಪಾಯಿಗಳವರೆಗೆ ಹಣ ವಸೂಲಿ ಮಾಡಿದ್ದಾರೆ. ಮಾಹಿತಿ ಪ್ರಕಾರ 50ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಗೆ ಈ ಜೋಡಿ ನಕಲಿ ಪತ್ರ ನೀಡಿ ವಂಚಿಸಿದ್ದು, ಒಟ್ಟು ವಂಚನೆಯ ಮೊತ್ತ ಅಂದಾಜು ಎರಡು ಕೋಟಿ ರೂಪಾಯಿಗಳಿಗೂ ಅಧಿಕ ಎಂದು ತಿಳಿದುಬಂದಿದೆ.

ನಕಲಿ ಲೆಟರ್‌ಹೆಡ್, ನಕಲಿ ಕೆಲಸದ ಆರ್ಡರ್

ಇನ್ನು ಆರೋಪಿ ಸಚಿನ್ ಉದ್ಯೋಗ ಆಕಾಂಕ್ಷಿಗಳಿಗೆ ತನ್ನ ಕೋಚಿಂಗ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಸುತ್ತಿದ್ದ. ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ನಕಲಿ ಲೆಟರ್‌ಹೆಡ್ ಮತ್ತು ಸೀಲುಗಳನ್ನು ಬಳಸಿ ಹುದ್ದೆ ಲಭಿಸಿರುವಂತೆ ನಕಲಿ ನೇಮಕಾತಿ ಪತ್ರಗಳನ್ನು ನೀಡುವ ಮೂಲಕ ಆಕಾಂಕ್ಷಿಗಳಿಗೆ ವಂಚಿಸಲಾಗಿದೆ.

ಇದನ್ನೂ ಓದಿ: ಪರೀಕ್ಷೆಗೆ ಹಾಜರಾಗದೆ ಜರ್ಮನ್ ಭಾಷಾ ಪ್ರಮಾಣಪತ್ರ ಪಡೆಯಲು ಹೋಗಿ ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!

ಸಚಿನ್ ಮತ್ತು ಸುಜಾತ ವಂಚನೆ ಬಂಡವಾಳ ಬಯಲಾಗುತ್ತಿದ್ದಂತೆ, ವಂಚನೆಗೊಳಗಾದ ಸಂತ್ರಸ್ತರು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಸಚಿನ್ ಮತ್ತು ಸುಜಾತರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *