ಶಿಕ್ಷಣ ಗ್ಯಾರಂಟಿImage Credit source: x.com/siddaramaiah
ಬೆಂಗಳೂರು, ಏಪ್ರಿಲ್ 29: 2025–26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ಫಲಿತಾಂಶ ಇತ್ತೀಚೆಗೆ ಬಿಡುಗಡೆಗೊಂಡಿದೆ. ಈ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಖಾಸಗಿ ಶಾಲಾ-ಕಾಲೇಜುಗಳು ನಾನಾ ಕಸರತ್ತು ನಡೆಸುತ್ತಿವೆ. ವಿಶೇಷವೆಂದರೆ, ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕಾಗಿ ಜಾಹೀರಾತು ನೀಡುವ ಮೂಲಕ ಗಮನಸೆಳೆದಿದೆ. ಆ ಮೂಲಕ ರಾಜ್ಯದಲ್ಲಿ ಉತ್ತಮಗುಣಮಟ್ಟದ ಶಿಕ್ಷಣ ಒದಗಿಸುವ ‘ಗ್ಯಾರಂಟಿ’ ನೀಡಿದೆ.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇತ್ತೀಚೆಗಷ್ಟೆ ಎರಡು ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತೇರ್ಗಡೆಯಲ್ಲಿ ದಾಖಲೆಯ ರಿಸಲ್ಟ್ ಬಂದಿದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕೂಡ ಉತ್ತಮ ರಿಸಲ್ಟ್ ದಾಖಲಾಗಿದೆ. ಎಸ್ಎಸ್ಎಲ್ಸಿಯಲ್ಲಿ ಶೇ 94. 10 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 86.48ರಷ್ಟು ಫಲಿತಾಂಶ ಬಂದಿದೆ.
ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾಖಲೆಯ ರಿಸಲ್ಟ್ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಮತ್ತಷ್ಟು ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲಾ-ಕಾಲೇಜುಗಳತ್ತ ಸೆಳೆಯಲು ಜಾಹಿರಾತು ನೀಡುವ ಮೂಲಕ ಗಮನಸೆಳೆದಿದೆ. ಆ ಮೂಲಕ ರಾಜ್ಯದಲ್ಲಿ ಉತ್ತಮಗುಣಮಟ್ಟ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ‘ಶಿಕ್ಷಣ ಗ್ಯಾರಂಟಿ’ ನೀಡುವ ಭರವಸೆ ನೀಡಿದೆ.
8 ಶಿಕ್ಷಣ ಗ್ಯಾರಂಟಿಗಳು
- ಗ್ಯಾರಂಟಿ 1: ಶಿಕ್ಷಕರ ಕೊರತೆಗೆ ಮುಕ್ತಿ; 5ನೇ ತರಗತಿಯವರೆಗೆ ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು ಹಾಗೂ 6ನೇ ತರಗತಿಯಿಂದ ಪ್ರತಿ ವಿಷಯಕ್ಕೂ ಪ್ರತ್ಯೇಕ ವಿಷಯವಾರು ಶಿಕ್ಷಕರ ನೇಮಕಾತಿ.
- ಗ್ಯಾರಂಟಿ 2: ಪೋಷಕರ ಆಶಯದಂತೆ ಬೋಧನಾ ಮಾಧ್ಯಮ; ಕನ್ನಡದ ಜೊತೆಗೆ ಎಲ್ಲಾ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮ ಲಭ್ಯ. ಇಂಗ್ಲಿಷ್‌ನಲ್ಲಿ ಬೋಧಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು.
- ಗ್ಯಾರಂಟಿ 3: ಉಚಿತ ಸಾರಿಗೆ ಸೌಲಭ್ಯ; ಕರ್ನಾಟಕ ಪಬ್ಲಿಕ್ ಶಾಲೆ (KPS) ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
- ಗ್ಯಾರಂಟಿ 4: ಡಿಜಿಟಲ್ ಶಿಕ್ಷಣ; 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಹಾಗೂ 3ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಕಲಿಕೆ, ಮುಂದಿನ 3 ವರ್ಷಗಳಲ್ಲಿ ಎಲ್ಲಾ ಕೆ.ಪಿ.ಎಸ್ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರ ನೇಮಕ ಮಾಡಲಾಗುವುದು.
- ಗ್ಯಾರಂಟಿ 5: ಕಲೆ ಮತ್ತು ದೈಹಿಕ ಶಿಕ್ಷಣ; ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕ, ಈ ವರ್ಷದಿಂದಲೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.
- ಗ್ಯಾರಂಟಿ 6: ಶೈಕ್ಷಣಿಕೇತರ ಕೆಲಸಗಳಿಂದ ಮುಕ್ತಿ; ಶೈಕ್ಷಣಿಕೇತರ ಕೆಲಸಗಳ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗುವುದು. ಇದರೊಂದಿಗೆ ಶಿಕ್ಷಕರು ಕೇವಲ ಬೋಧನೆಯ ಮೇಲೆ ಮಾತ್ರ ಗಮನಹರಿಸಲು ಅವಕಾಶ.
- ಗ್ಯಾರಂಟಿ 7: ಕಲಿಕೆಯ ಗುಣಮಟ್ಟದ ಮೇಲ್ವಿಚಾರಣೆ; ಪ್ರತಿ ಮಗುವಿನ ಪ್ರಗತಿಗಾಗಿ ‘ಪಾಠ ಆಧಾರಿತ ಮೌಲ್ಯಮಾಪನ’ (Lesson Based Assessment) ವ್ಯವಸ್ಥೆ, ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರು ಮತ್ತು ಶಿಕ್ಷಕರ ಕಡ್ಡಾಯ ಸಭೆ ಮಾಡುವುದು.
- ಗ್ಯಾರಂಟಿ 8: ಕೌಶಲ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ; 6ನೇ ತರಗತಿಯಿಂದಲೇ ಕೌಶಲ ಶಿಕ್ಷಣ ಪ್ರಾರಂಭಿಸಲಾಗುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿಶೇಷ ತರಬೇತಿ ಸೌಲಭ್ಯ ಒದಗಿಸಲಾಗುವುದು. ಹೀಗೆ 8 ಶಿಕ್ಷಣ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
