ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಿದೆ. ಚಿತ್ರತಂಡ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು, ಸುದ್ದಿಗೋಷ್ಠಿಯಲ್ಲಿ ನಟ ಸುದೀಪ್ ಸಹ ಭಾಗಿ ಆಗಿದ್ದರು. ‘ಕೆಡಿ’ ಸಿನಿಮಾನಲ್ಲಿ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಸಿನಿಮಾದ ಬಗ್ಗೆ, ತಮ್ಮ ಹಾಗೂ ಪ್ರೇಮ್ ಅವರ ಗೆಳೆತನದ ಬಗ್ಗೆ, ಧ್ರುವ ಸರ್ಜಾ ಬಗ್ಗೆ ಇನ್ನೂ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದರು. ಅದೇ ಕಾರ್ಯಕ್ರಮದಲ್ಲಿ ಪ್ರೇಮ್ ಅವರು ಬರೆದ ಹಾಡು ವಿವಾದಕ್ಕೀಡಾದ ಬಗ್ಗೆಯೂ ಮಾತನಾಡಿದರು.
‘ಕೆಡಿ’ ಸಿನಿಮಾಕ್ಕಾಗಿ ‘ಸರ್ಸೆ ಸೆರಗು’ ಎಂಬ ಹಾಡೊಂದನ್ನು ಪ್ರೇಮ್ ಬರೆದಿದ್ದು, ನೋರಾ ಫತೇಹಿ ಡ್ಯಾನ್ಸ್ ಮಾಡಿದ್ದ ಆ ಐಟಂ ಹಾಡು ಕೆಲ ವಾರಗಳ ಹಿಂದೆ ಬಿಡುಗಡೆ ಆಗಿತ್ತು. ಹಾಡಿಗೆ ತೀವ್ರ ವಿರೋಧ ಉತ್ತರ ಭಾರತದಲ್ಲಿ ವ್ಯಕ್ತವಾಯ್ತು. ಲೋಕಸಭೆಯಲ್ಲೂ ಸಹ ಹಾಡಿನ ಬಗ್ಗೆ ಚರ್ಚೆ ಆಗಿದ್ದಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ಸಹ ದಾಖಲಿಸಿಕೊಂಡಿತು. ಕೊನೆಗೆ ಹಾಡನ್ನು ಯೂಟ್ಯೂಬ್ನಿಂದ ತೆಗೆಯಲಾಯ್ತು. ಹಲವರು ಹಲವು ರೀತಿಯಲ್ಲಿ ಹಾಡಿನ ಬಗ್ಗೆ ಮಾತನಾಡಿದರು. ಇದೀಗ ಸುದೀಪ್ ಸಹ ವಿವಾದದ ಬಗ್ಗೆ ಮಾತನಾಡಿದ್ದು, ಪ್ರೇಮ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದೀಪ್, ‘ಪ್ರೇಮ್ ಹಲವಾರು ಅದ್ಭುತವಾದ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದಾರೆ. ತಾಯಿಯ ಬಗ್ಗೆ, ಪ್ರೀತಿಯ ಬಗ್ಗೆ ಹಲವಾರು ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಈಗ ತಪ್ಪಾಗಿದೆ, ಕೆಲವೊಮ್ಮೆ ಹಾಗಾಗುವುದುಂಟು, ಏನೋ ಮಾಡುವ ಪ್ರಯತ್ನ ಮಾಡುತ್ತೇವೆ, ಅದು ಸರಿಯಾಗಿ ವರ್ಕೌಟ್ ಆಗುವುದಿಲ್ಲ, ಈಗಲೂ ಆಗಿರುವುದು ಅದೇ. ಅಷ್ಟು ಮಾತ್ರಕ್ಕೆ, ನಮ್ಮ ವ್ಯಕ್ತಿಯನ್ನೇ ನಾವು ಕಡೆಗಣಿಸುವುದು, ಕ್ಷುಲ್ಲಕವಾಗಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:‘ಕೆಡಿ’ ವಿಳಂಬ ಆಗಿದ್ದೇಕೆ? ಪ್ರೇಮ್ ಪರವಾಗಿ ನಿಂತ ಸುದೀಪ್
ಹೊರ ರಾಜ್ಯದವರಿಗೆ ಪ್ರೇಮ್ ಅವರ ಕೆಲಸ ಗೊತ್ತಿಲ್ಲ. ಕನ್ನಡ ಸಿನಿಮಾಕ್ಕೆ ಪ್ರೇಮ್ ಅವರ ಕಾಣ್ಕೆ ಗೊತ್ತಿಲ್ಲ. ಅವರು ಏನಾದರೂ ಮಾತನಾಡಿಕೊಳ್ಳಲಿ ಆದರೆ ನಮಗೆ ಗೊತ್ತಲ್ಲ. ಇಷ್ಟೋಂದು ಸೇವೆ ನೀಡಿರುವ, ಕಾಣಿಕೆಗಳನ್ನು ನೀಡಿರುವ ವ್ಯಕ್ತಿಯನ್ನು ಒಂದೇ ಒಂದು ವಿಷಯ ಇರಿಸಿಕೊಂಡು ಸಣ್ಣವರನ್ನಾಗಿ ಮಾಡಿಬಿಟ್ಟಂತೆ ನನಗೆ ಭಾಸವಾಯ್ತು. ನಾನು ಆ ಸಮಯದಲ್ಲಿ ಪ್ರೇಮ್ ಅವರ ಜೊತೆಗೆ ಮಾತನಾಡಿದೆ. ಏನೂ ಆಗಿಲ್ಲ, ಆ ಸಾಹಿತ್ಯ ಕೈಬಿಟ್ಟು ಮತ್ತೊಂದು ಸಾಹಿತ್ಯ ಬರೆದು ಬಿಟ್ಟರಾಯ್ತು ಬಿಡಿ ಎಂದು ಧೈರ್ಯ ತುಂಬಿದೆ, ಈಗ ಹಾಗೆಯೇ ಮಾಡಲಾಗಿದೆ’ ಎಂದಿದ್ದಾರೆ ಸುದೀಪ್.
‘ಕೆಡಿ’ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಿದ್ದು, ಕೆವಿಎನ್ ನಿರ್ಮಾಣ ಮಾಡಿದೆ. ಸಿನಿಮಾನಲ್ಲಿ ದೊಡ್ಡ ತಾರಾಗಣವೇ ಇದೆ. ರೀಷ್ಮಾ ನಾಯಕಿ, ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ಅಭಿಜಿತ್ ಇನ್ನೂ ಕೆಲವರಿದ್ದಾರೆ. ನಟ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾಕ್ಕಿದೆ. ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
