ಗದಗ, ಫೆ.21: ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ಅವರು 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಅವರ ಬಾಲಾಜಿ ಆಸ್ಪತ್ರೆಯಲ್ಲಿ ಈ ದಾಳಿ ನಡೆದಿದೆ. ಶಾಸಕ ಲಮಾಣಿ ಅವರೊಂದಿಗೆ ಅವರ ಸರ್ಕಾರಿ ಪಿಎ ವಾಲ್ಮೀಕಿ ಮತ್ತು ಖಾಸಗಿ ಪಿಎ ಮಂಜುನಾಥ್ ಹಾಗೂ ಗುರು ಲಮಾಣಿ ಎಂಬ ಇಬ್ಬರು ಸಹಾಯಕರು ಸಹ ಲೋಕಾಯುಕ್ತರ ವಶದಲ್ಲಿದ್ದಾರೆ. ಒಟ್ಟು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗುತ್ತಿಗೆದಾರರೊಬ್ಬರಿಂದ 5 ಲಕ್ಷ ರೂ. ಕಮಿಷನ್ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಏಕಾಏಕಿ ದಾಳಿ ನಡೆಸಿದರು. ರಸ್ತೆ ಪಕ್ಕದಲ್ಲಿ ಒಂದು ಕೋಟಿ ರೂಪಾಯಿ ಮೊತ್ತದ ವಾಲ್ ನಿರ್ಮಾಣ ಮಾಡುವ ಕೆಲಸಕ್ಕೆ ಶಾಸಕರು 12 ಪರ್ಸೆಂಟ್ ಕಮಿಷನ್ ಕೇಳಿದ್ದರು. ನಂತರ 11 ಪರ್ಸೆಂಟ್ ಗೆ ವ್ಯವಹಾರ ಕುದುರಿತ್ತು ಎನ್ನಲಾಗಿದೆ. ಈ ಹಣವನ್ನು ಅವರ ಪಿಎ ಮೂಲಕ ಸ್ವೀಕರಿಸಲು ಸೂಚಿಸಿದಾಗ, ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದೀಗ ಅವರನ್ನು ವಶಪಡೆದುಕೊಂಡು ವಿಚಾರಣೆ ಕರೆದುಕೊಂಡು ಹೋಗುವ ದೃಶ್ಯ ಇಲ್ಲಿದೆ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.