ಬಾಲಿವುಡ್‌ನ ‘ಸುಲ್ತಾನ್’ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ಲೇಟೆಸ್ಟ್ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿ ಅಭಿಮಾನಿಗಳು ಭಾರಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಟನ ದೈಹಿಕ ಬದಲಾವಣೆ ಮತ್ತು ವಿಪರೀತ ತೂಕ ಇಳಿಕೆ ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಮುಂಬೈನ ಸ್ಲಮ್ ಪುನರ್ವಸತಿ ಪ್ರಾಧಿಕಾರ (SRA) ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಅತ್ಯಾಧುನಿಕ ಡೇಟಾ ಕಲೆಕ್ಷನ್ ಮತ್ತು ವೆರಿಫಿಕೇಶನ್ ಸಪೋರ್ಟ್ ಸೆಂಟರ್ (ಐಟಿ ಸರ್ವರ್ ರೂಮ್) ಉದ್ಘಾಟಿಸಿದರು. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಮನೆಯ ಕೀಲಿಗಳನ್ನು ಹಸ್ತಾಂತರಿಸಿದರು. ಆದರೆ, ಈ ಕಾರ್ಯಕ್ರಮದ ವಿಡಿಯೋಗಳು ಹೊರಬೀಳುತ್ತಿದ್ದಂತೆ ಎಲ್ಲರ ಗಮನ ಸಲ್ಲು ಅವರ ಆರೋಗ್ಯದ ಕಡೆ ನೆಟ್ಟಿದೆ.
ಸಲ್ಮಾನ್ ಕಂಡ ಕಂಗಾಲಾದ ಫ್ಯಾನ್ಸ್:
ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಯೊಬ್ಬರು, ‘ಅವರನ್ನು ನೋಡಿದರೆ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದೆ, ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಮೊದಲ ನೋಟಕ್ಕೆ ಇವರು ಸಲ್ಮಾನ್ ಖಾನ್ ಎಂದು ನಂಬಲು ಸಾಧ್ಯವಾಗಲಿಲ್ಲ. ಪಕ್ಕದಲ್ಲಿ ಬಾಡಿಗಾರ್ಡ್ ಶೇರಾ ಇದ್ದಿದ್ದರಿಂದ ಗುರುತಿಸಿದೆ. ಇವರಿಗೆ ಏನಾಗಿದೆ?’ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು, ‘ಸಿನಿಮಾದಲ್ಲಿ ಒಬ್ಬಂಟಿಯಾಗಿ 50 ಜನರನ್ನು ಬಡಿಯುವ ನಮ್ಮ ಭಾಯ್ ಕಣ್ಣುಗಳಲ್ಲಿ ಇಂದು ಸುಸ್ತು ಎದ್ದು ಕಾಣುತ್ತಿದೆ. ಅವರ ಹವಾ ಕಮ್ಮಿಯಾದಂತೆ ಭಾಸವಾಗುತ್ತಿದೆ’ ಎಂದು ಭಾವುಕರಾಗಿದ್ದಾರೆ.
ಬೆಂಬಲಕ್ಕೆ ನಿಂತ ನೆಟ್ಟಿಗರು:
ಒಂದೆಡೆ ಸಲ್ಮಾನ್ ಖಾನ್ ಅವರ ಆರೋಗ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಹಲವು ನೆಟ್ಟಿಗರು ಸಲ್ಲು ಅವರ ಪರವಾಗಿ ಮಾತನಾಡಿದ್ದಾರೆ. ‘ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ಒಬ್ಬರು ಕ್ಯಾಮೆರಾ ಮುಂದೆ ತಮಗೆ ವಯಸ್ಸಾಗುತ್ತಿರುವುದನ್ನು ಒಪ್ಪಿಕೊಂಡು ಯಾವುದೇ ಮೇಕಪ್ ಇಲ್ಲದೆ ಬರುವುದು ಸಾಮಾನ್ಯದ ಮಾತಲ್ಲ. ಈ ಹಿಂದೆ ರಜನಿಕಾಂತ್ ಇದನ್ನು ಮಾಡಿದ್ದರು. ಈಗ ಸಲ್ಮಾನ್ ಖಾನ್ ಅವರು 60 ವರ್ಷ ಪ್ರಾಯದ ಲುಕ್ ಅನ್ನು ಗೌರವಯುತವಾಗಿ ಒಪ್ಪಿಕೊಂಡಿದ್ದಾರೆ. ಅವರಿಗೆ ಗೌರವ ನೀಡಬೇಕು’ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ‘ಮಾತೃಭೂಮಿ’ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ? ಬಿಡುಗಡೆ ಬಗ್ಗೆ ಹೆಚ್ಚಿದ ಆತಂಕ
ಇನ್ನು ಕೆಲವರು, ಬಾಲಿವುಡ್ ತಾರೆಯರು ತಮ್ಮ ವಯಸ್ಸನ್ನು ಮುಚ್ಚಿಡಲು ಏನೆಲ್ಲಾ ಕಸರತ್ತು ಮಾಡುತ್ತಾರೆ, ಆದರೆ ಸಲ್ಮಾನ್ ಪಿಆರ್ ತಂಡದ ಮಾತನ್ನೂ ಕೇಳದೆ ಹೀಗೆ ನೈಜವಾಗಿ ಬಂದಿರುವುದು ಅವರ ಸರಳತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಸದ್ಯಕ್ಕೆ ಸಲ್ಮಾನ್ ಖಾನ್ ಅವರ ಈ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದ್ದು, ಅವರ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ. ಸದ್ಯದಲ್ಲೇ ಅವರು ‘ಮಾತೃಭೂಮಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.