ಬೆಂಗಳೂರು, ಜುಲೈ 22: ಸಯಪಾಠಿ ವಿದ್ಯಾರ್ಥಿನಿಗೆ ”Pretty” (ನೀವು ತುಂಬಾ ಸುಂದರ) ಎಂದು ಇನ್‌ಸ್ಟಾಗ್ರಾಂನಲ್ಲಿ ಡೈರೆಕ್ಟ್ ಮೆಸೇಜ್ (DM) ಕಳುಹಿಸಿದ್ದ ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಸುಮಾರು 2 ವರ್ಷಗಳ ಹಿಂದೆ ಘನತೆಗೆ ಚ್ಯುತಿ ಸೇರಿ ಕೆಲ ಆರೋಪಗಳಡಿ 20 ವರ್ಷದ ವಿದ್ಯಾರ್ಥಿಯ ವಿರುದ್ಧ ಐಪಿಎಸ್ ಅಧಿಕಾರಿಯೋರ್ವರ ಪುತ್ರಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಯುವಕನ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇದು ಇಬ್ಬರು ಸಹಪಾಠಿಗಳ ನಡುವಿನ ಖಾಸಗಿ ಸಂಭಾಷಣೆ. ಇದು ಸಾರ್ವಜನಿಕವಾಗಿ ಪ್ರಕಟವಾದ ಸಂದೇಶವಲ್ಲ. ಇಂದಿನ ಯುವಜನರು ಬಳಸುವ ‘ಜನರೇಷನ್ Z’ (Gen Z) ಭಾಷೆಯನ್ನು ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಪ್ರಕರಣದ ತನಿಖೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟರು. ಪ್ರಕರಣ ಸಂಬಂಧ ಮುಂದಿನ ಕ್ರಮಕ್ಕೆ ಈ ಹಿಂದೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು ಎನ್ನುವುದೂ ಇಲ್ಲಿ ಗಮನಾರ್ಹ.
ವಿದ್ಯಾರ್ಥಿ ಪರ ವಕೀಲರ ವಾದವೇನು?
ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳ ಪ್ರಕಾರ, ವಿದ್ಯಾರ್ಥಿ ಕಳುಹಿಸಿದ್ದ ಡಿಎಂಗೆ ಯುವತಿ ಕೂಡ ಧನ್ಯವಾದ ಎಂದು ಉತ್ತರಿಸಿದ್ದರು. ಆದರೆ ವಿದ್ಯಾರ್ಥಿ ಕಳುಹಿಸಿದ್ದ ಇನ್‌ಸ್ಟಾಗ್ರಾಂ ಸಂದೇಶವನ್ನು ಯುವತಿ ತನ್ನ ತಂದೆಗೆ ತೋರಿಸಿದ ಬಳಿಕ ಈ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ವಿದ್ಯಾರ್ಥಿಯ ಪರ ವಾದ ಮಂಡಿಸಿದ ವಕೀಲರು, ಯುವಕ ಪ್ರತಿಭಾವಂತ ಕ್ರಿಕೆಟಿಗನಾಗಿದ್ದು, ತಮಿಳುನಾಡು ತಂಡವನ್ನು ಪ್ರತಿನಿಧಿಸುವ ಕನಸು ಹೊಂದಿದ್ದಾನೆ. ಈ ಕ್ರಿಮಿನಲ್ ಪ್ರಕರಣದಿಂದ ಆತನ ಕ್ರೀಡಾ ಬದುಕಿಗೆ ಗಂಭೀರ ಹಾನಿಯಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.
ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ; ರಾಜ್ಯ ಸರ್ಕಾರ, ಸಿಬಿಐಗೆ ಕರ್ನಾಟಕ ಹೈಕೋರ್ಟ್ ನೋಟಿಸ್
ನ್ಯಾಯಾಲಯ ಹೇಳಿದ್ದೇನು?
ತನಿಖೆಯ ವೇಳೆ ಪೊಲೀಸರು ವಿದ್ಯಾರ್ಥಿಯ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದರು. ಆದರೆ ಕಾನೂನಿನಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ವಿಧಾನವನ್ನು ಪಾಲಿಸದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಕೀಲರು ಆಕ್ಷೇಪಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ, ಈ ಪ್ರಕರಣದಲ್ಲಿ ಹಿಂಬಾಲಿಸುವುದು (Stalking), ವಾಯರಿಸಂ (Voyeurism) ಅಥವಾ ಮಹಿಳೆಯ ಘನತೆಗೆ ಧಕ್ಕೆ ತರುವ ಯಾವುದೇ ಕೃತ್ಯ ನಡೆದಿರುವುದು ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟು, ವಿದ್ಯಾರ್ಥಿಯ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 1:00 pm, Wed, 22 July 26
