ಸಾರ್ವಜನಿಕರ ಕುಂದು ಕೊರತೆಗಳ ನಿರ್ವಹಣೆಗೆ, NRIಗೆ ಪ್ರತ್ಯೇಕ ಸಚಿವಾಲಯ: ಸಿಎಂ ಡಿಕೆಶಿ ಮಹತ್ವ ಘೋಷಣೆ – Kannada News

ಬೆಂಗಳೂರು, (ಜೂನ್ 04): ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ.ಇದಕ್ಕೆ ಪೂರಕವೆಂಬಂತೆ ಇಂದು (ಜೂನ್ 04) ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ವಿಶೇಷ ಸಭೆ ನಡೆಸಿದ್ದು, ಖಡಕ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ರಾಜ್ಯದ ಅಭಿವೃದ್ಧಿ, ಕಾನೂನು ಸುವ್ಯಸ್ಥೆ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಕುರಿತು ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸಾರ್ವಜನಿಕ ಕುಂದು ಕೊರತೆಗಳ ನಿರ್ವಹಣೆಗೆ ಮತ್ತು ಅನಿವಾಸಿ ಭಾರತೀಯರಿಗೆ (ಎನ್ಆರ್‌ಐ) ಸಂಬಂಧಪಟ್ಟಂತೆ ಪ್ರತ್ಯೇಕ ಸಚಿವಾಲಯಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.

ಮುಖ್ಯಾಂಶಗಳು

  • ಸಿಎಂ ಆದ ಬಳಿಕೆ ಡಿಕೆ ಶಿವಕುಮಾರ್ ಅಧಿಕಾರಿಗಳ ಜೊತೆ ಮೊದಲ ಮಹತ್ವದ ಸಭೆ
  • ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಜತೆ ಸಭೆ ಮಾಡಿ ಆಡಳಿತ ಯಂತ್ರಕ್ಕೆ ಚುರುಕು
  • ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ ಸಿಎಂ ಡಿಕೆ ಶಿವಕುಮಾರ್
  • ಸಾರ್ವಜನಿಕರು ಕುಂದುಕೊರತೆ ಆಲಿಸಲು ಪ್ರತ್ಯೇಕ ಸಚಿವಾಲಯ ಘೋಷಣೆ

ಸಾರ್ವಜನಿಕ ಕುಂದುಕೊರತೆಗೆ ಪ್ರತ್ಯೇಕ ಸಚಿವಾಲಯ

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸಾರ್ವಜನಿಕ ಕುಂದುಕೊರತೆಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುವುದು. ದಿನಕ್ಕೆ ಎರಡು ಮೂರು ತಂಡ ಪ್ರತಿಭಟನೆ ಮಾಡುತ್ತಿರುತ್ತದೆ. ಅವರ ಅಹವಾಲು ಕೇಳಬೇಕಾಗಿದೆ. ಯಾಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ? ಅವರ ಬೇಡಿಕೆಗಳೇನು? ಸಮಸ್ಯೆಗಳೇನು? ಎಂಬ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಬಳಿಕ ಅವರ ಸಮಸ್ಯೆಗೆ ಸ್ಪಂದಿಸಲು, ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ, ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆಗಳೇನು?

ಪ್ರತಿನಿತ್ಯ ತಮ್ಮ ಹಕ್ಕುಗಳಿಗಾಗಿ ಅನೇಕ ಹೋರಾಟಗಾರರು, ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತವೆ.ಅವರ ಸಮಸ್ಯೆಗಳನ್ನು ಆಲಿಸುವುದು ಸರ್ಕಾರದ ಕರ್ತವ್ಯ.ಹೀಗಾಗಿ ಹೋರಾಟಗಾರರ ಆಹವಾಲುಗಳನ್ನು ಆಲಿಸಲು ಪ್ರತ್ಯೇಕ ಮಂತ್ರಿ ಹಾಗೂ ಸಚಿವಾಲಯನ್ನು ಮಾಡಲಿದ್ದೇವೆ. ವಾರಕ್ಕೊಬ್ಬ ಸಚಿವರು ಭೇಟಿ ಮಾಡಿ ಮಾತನಾಡಲಿದ್ದಾರೆ. ಹೋರಾಟಗಾರರ ನೋವಿಗೆ ಸ್ಪಂದಿಸುವ ಕೆಲಸವನ್ನು ಈ ಸಚಿವಾಲಯ ಮಾಡಲಿದೆ ಎಂದು ವಿವರಿಸಿದರು.

ಎನ್ಆರ್‌ಐಗೆ ಪ್ರತ್ಯೇಕ ಸಚಿವಾಲಯ

ಇನ್ನು ಎನ್ಆರ್‌ಐಗೆ ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಹಲವು ಎನ್‌ಆರ್‌ಐಗಳು ರಾಜ್ಯದಲ್ಲಿ ಹೂಡಿಕೆ ಮಾಡುತ್ತಾರೆ. ಅವರ ಸಮಸ್ಯೆಗಳು, ಅವರ ಹೂಡಿಕೆಗಳಿಗೆ ಬೇಕಾದ ಪೂರಕ ವಾತಾವರಣ, ಅವರ ಸಮಸ್ಯೆ ನಿವಾರಣೆಗಾಗಿ, ಸಮನ್ವಯತೆಗಾಗಿ ಪ್ರತ್ಯೇಕ ಎನ್ಆರ್‌ಐ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸಿಗುತ್ತಾ ಸ್ಪಂದನೆ?

ಇನ್ನು ಅನೇಕ ವಿಚಾರವಾಗಿ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಇರಲಿಲ್ಲ. ನಾಮಕಾಸ್ತೆವಾಗಿ ಆಯಾ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿ ಸುಮ್ಮನಾಗುತ್ತಿದ್ದರು. ಆದ್ರೆ, ಇದೀಗ ಪ್ರತ್ಯೇಕ ಸಚಿವಾಲಯ ರಚನೆಯಾದರೆ ಸಾರ್ವಜನಿಕರ ಕುಂದುಕೊರತೆಗಳನ್ನು ಕೇಳಲು ನಿರ್ಧಿಷ್ಟವಾದ ಸ್ಥಳ ಹಾಗೂ ಅದಕ್ಕೊಬ್ಬರು ಸಚಿವರು ಇರುತ್ತಾರೆ. ಹೀಗಾಗಿ ಜನರ ಕಷ್ಟಗಳನ್ನ ಆಲಿಸಲು ಒಂದು ಕಚೇರಿ ಇರುತ್ತೆ. ಆದ್ರೆ, ಅದು ಎಷ್ಟರ ಮಟ್ಟಿಗೆ ಜನರು ಕಷ್ಟಗಳನ್ನ ಆಲಿಸುತ್ತೆ ಎನ್ನುವುದನನ್ನು ಕಾದುನೋಡಬೇಕಿದೆ.

Source link

Leave a Reply

Your email address will not be published. Required fields are marked *