
ಬೆಂಗಳೂರು, ಮಾರ್ಚ್ 09: ಅಭಿವೃದ್ಧಿಯ ಹೆಸರಲ್ಲಿ ಪರಿಸರದ ನಾಶದಿಂದಾಗಿ ಪ್ರಾಕೃತಿಕ ಸಮತೋಲನ ಹಾಳಾಗಿ ಈಗಾಗಲೇ ಸಾಲು ಸಾಲು ಸಂಕಷ್ಟಗಳನ್ನು ಜನ ಅನುಭವಿಸುತ್ತಿದ್ದಾರೆ. ಪರಿಸರವನ್ನು ಉಳಿಸುವ ಸಲುವಾಗಿ ಅದೆಷ್ಟೋ ಸಂಘ-ಸಂಸ್ಥೆಗಳು ಗಿಡಗಳನ್ನು ನೆಡುವ ಜೊತೆಗೆ ಪರಿಣಾಮಕಾರಿ ಕೆಲಸಗಳನ್ನು ಮಾಡುತ್ತಿವೆ. ಪರಿಸರ ನಾಶದಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈಹಾಕಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಅಂತಾರಾಷ್ಟ್ರೀಯ ಕನ್ವೆನ್ಷನ್ ಹಾಲ್ ಹೆಸರಲ್ಲಿ ಸಾವಿರಾರು ಮರಗಳ ಮಾರಾಣಹೋಮಕ್ಕೆ ಸರ್ಕಾರ ಸಜ್ಜಾಗಿದೆ ಎಂಬ ವಿಚಾರ ಹರಿದಾಡಿದ್ದು, ಈ ಬಗ್ಗೆ ಪರಿಸರ ಪ್ರಿಯರಿಂದ ಭಾರಿ ವಿರೋಧ ಕೇಳಿಬಂದಿದೆ.
ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಆವರಣದ 22 ಎಕರೆ ಜಾಗದಲ್ಲಿ ಕನ್ವೆನ್ಶನ್ ಸೆಂಟರ್ ಮತ್ತು ಎಕ್ಸಿಬಿಷನ್ ಸೆಂಟರ್ ನಿರ್ಮಿಸುವ ಬಗ್ಗೆ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಹಲವು ವರ್ಷಗಳಿಂದ ಈ ಕಾರ್ಖಾನೆಯ ಕೆಲಸ ಸ್ಥಗಿತಗೊಂಡಿದೆ. ಸದ್ಯ ಈ ಕಾರ್ಖಾನೆ ಪ್ಲಾಂಟೆಷನ್ ತುಂಬೆಲ್ಲ ಸಾವಿರಾರು ಮರಗಳಿದ್ದು, ಇವುಗಳನ್ನ ಕಡಿದು ಆ ಜಾಗದಲ್ಲಿ 10 ಸಾವಿರ ಜನರಿಗೆ ವ್ಯವಸ್ಥೆಯಾಗುವಂತೆ ಅಂತಾರಾಷ್ಟ್ರೀಯ ಕನ್ಷೆಷನ್ ಸೆಂಟರ್, ಎಕ್ಸಿಬಿಷನ್ ಸೆಂಟರ್, 5 ಸ್ಟಾರ್ ಹೊಟೇಲ್‌ಗಳು, ಮಲ್ಟಿಪ್ಲೆಕ್ಸ್ ಹಾಲ್ ಮತ್ತು 50 ವರ್ಷ ಬಾಳಿಕೆ ಬರುವ ಅಂಡರ್ ಗ್ರೌಂಡ್ ಪಾರ್ಕಿಂಗ್ ಮಾಡಲು ನಿರ್ಧಾರ ಮಾಡಲಾಗಿದೆ. ಬೇರೆ ದೇಶದ ಗಣ್ಯರು ಬಂದ್ರೆ ಉಳಿದುಕೊಳ್ಳಲು ವ್ಯವಸ್ಥೆಯಾಗುವ ರೀತಿ ಯೋಜನೆ ನಿರ್ಮಿಸಲು ಪ್ಲ್ಯಾನ್ ನಡೆದಿದೆ.
ಇದನ್ನೂ ಓದಿ: ಬಿಸಿಲಿನ ತಾಪಕ್ಕೆ ‘ಬೆಂದಕಾಳೂರು’ ವಿಲ ವಿಲ! ಮಣ್ಣಿನ ಮಡಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಆದರೆ ಅಂತಾರಾಷ್ಟ್ರೀಯ ಕನ್ವೆನ್ಷನ್ ಹಾಲ್ ಹೆಸರಲ್ಲಿ ಮರಗಳ ಮಾರಣ ಹೋಮಕ್ಕೆ ಪರಿಸರವಾದಿ ಜೋಸೆಫ್ ಆಕ್ಷೇಪ ವ್ಯಕ್ತಪಡಿಸಿದ್ದು, ದಯವಿಟ್ಟು ಮರಗಳನ್ನು ಕಡಿಯೋದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ಶೇ. 93ರಷ್ಟು ಮರಗಳನ್ನು ಕಡಿದು ಹಾಕಿದ್ದೇವೆ. ನಗರದಲ್ಲಿ ಈಗಾಗಲೇ ಮರಗಳ ಸಂಖ್ಯೆ ಸಹ ಕಡಿಮೆಯಾಗಿದೆ. ಕೆರೆಗಳ ನಿರ್ವಹಣೆ ಇಲ್ಲದೆ ಬೆಂಗಳೂರು ಡೆಡ್ ಸಿಟಿ ಆಗಿದೆ. ಇದರ ಜೊತೆಗೆ ಮತ್ತೆ ಸರ್ಕಾರ ಮರಗಳಿಗೆ ಕೊಡಲಿ ಹಾಕಿ ಬಿಲ್ಡಿಂಗ್ ಕಟ್ಟಲು ಮುಂದಾಗ್ತಿದೆ. ಈಗಾಗಲೇ ದೆಹಲಿಯನ್ನು ಮೀರಿಸುವ ಮಟ್ಟದಲ್ಲಿ ಬೆಂಗಳೂರು ವಾತಾವರಣ ಬದಲಾವಣೆ ಆಗಿದೆ. ಉಸಿರಾಟದ ತೊಂದರೆಗಳು, ತಾಪಮಾನದಲ್ಲಿ ಬದಲಾವಣೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಅಭಿವೃದ್ಧಿ ಹೆಸರಿನಲ್ಲಿ ಮರಗಳಿಗೆ ಕೊಡಲಿ ಹಾಕೋದು ತಪ್ಪು ಎಂದು ಅವರು ತಿಳಿಸಿದ್ದಾರೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.