ಸಾವು ಹೀಗೂ ಬರಬಹುದು: ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು – Kannada News

ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಸಾವುImage Credit source: Tv9 kannada

ಬ್ರಹ್ಮಾವರ, ಜೂ.11: ತಾಯಿಯ ಮಡಿಲಿಗಿಂತ ಸುರಕ್ಷಿತವಾದ ಜಾಗ ಈ ಪ್ರಪಂಚದಲ್ಲಿ ಮತ್ತೊಂದಿಲ್ಲ. ಆದರೆ, ಆ ವಿಧಿಯ ಕ್ರೂರ ಆಟಕ್ಕೆ ಆ ತಾಯಿಯ ಮಡಿಲು ಮಗುವನ್ನು ರಕ್ಷಿಸಲಾಗಲಿಲ್ಲ. ಹೆತ್ತ ಒಡಲ ಎದೆಗಪ್ಪಿ ಕುಳಿತಿದ್ದ ಒಂದೂವರೆ ವರ್ಷದ ಮುದ್ದಾದ ಕಂದಮ್ಮನ ಮೇಲೆ ಆಕಸ್ಮಿಕವಾಗಿ ತೆಂಗಿನಕಾಯಿ ಬಿದ್ದು ಪ್ರಾಣ ಕಳೆದುಕೊಂಡ ಅತ್ಯಂತ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜೆ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಇಡೀ ಗ್ರಾಮದಲ್ಲಿ ಶೋಕ ಸಾಗರದಲ್ಲಿ ಮುಳುಗಿಸಿದೆ.

ಚಾಂತಾರು ಹೆರಂಜೆ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಎರಡನೇ ಪುತ್ರ ದಕ್ಷ (ಒಂದೂವರೆ ವರ್ಷ) ಮೃತಪಟ್ಟ ದುರ್ದೈವಿ. ತನ್ನ ಮುಗ್ಧ ನಗು ಹಾಗೂ ತೊದಲು ನುಡಿಗಳಿಂದ ಇಡೀ ಮನೆಯವರಿಗೆ ಪ್ರೀತಿಯನ್ನು ನೀಡುತ್ತಿದ್ದ ಮುದ್ದಿನ ಕಂದನ ಬದುಕು ಇಷ್ಟೊಂದು ಬೇಗ ಕಮರಿ ಹೋಗುತ್ತದೆ ಎಂದು ಹೆತ್ತವರು ಕನಸಿನಲ್ಲೂ ಯೋಚಿಸಿರಲಿಲ್ಲ.

ಮನೆಯ ಸಮೀಪ ತಾಯಿ ಸುಚಿತ್ರಾ ಅವರು ಮಗುವನ್ನು ಎತ್ತಿಕೊಂಡು ಮಡಿಲಲ್ಲಿ ಇಟ್ಟುಕೊಂಡಿದ್ದ ವೇಳೆ, ಸಮೀಪದ ತೆಂಗಿನ ಮರದಿಂದ ಏಕಾಏಕಿ ತೆಂಗಿನಕಾಯಿಯೊಂದು ಉದುರಿ ನೇರವಾಗಿ ಮಗುವಿನ ತಲೆಯ ಮೇಲೆ ಬಿದ್ದಿದೆ. ದೊಡ್ಡ ಪೆಟ್ಟಿನಿಂದಾಗಿ ಮಗು ದಕ್ಷ ತೀವ್ರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾನೆ. ಘಟನೆಯಿಂದ ತಾಯಿ ಹಾಗೂ ಕುಟುಂಬಸ್ಥರು ಕಂಗೆಟ್ಟು ಆಕ್ರಂದನ ಮುಗಿಲು ಮುಟ್ಟಿದೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ರಕ್ತದ ಮಡುವಿನಲ್ಲಿದ್ದ ಮಗುವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇನ್ನು ವೈದ್ಯರು ಮಗುವಿನ ಪ್ರಾಣ ಉಳಿಸಲು ಹರಸಾಹಸ ಪಟ್ಟಿದ್ದು, ತುರ್ತು ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ, ತಲೆಗೆ ಬಲವಾದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ. ಮಗು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಪೋಷಕರ ರೋದನ ನೋಡಲಾಗದಂತಿತ್ತು. ಮಗುವಿನ ಕಿಲಕಿಲ ನಗುವಿನಿಂದ ತುಂಬಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.

ಇದನ್ನೂ ಓದಿ: ಹಾಸ್ಟೆಲ್ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ; ಆಹಾರ ಸೇವಿಸಿದ್ದ 15 ವಿದ್ಯಾರ್ಥಿನಿಯರು ಅಸ್ವಸ್ಥ

ಈ ದುರಂತದ ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ಮಗುವಿನ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದ್ದಾರೆ. ಚಾಂತಾರು ಸುತ್ತಮುತ್ತಲಿನ ಜನರು ಕಂಬನಿ ಮಿಡಿದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *