ಬೆಂಗಳೂರು, ಏಪ್ರಿಲ್ 23: ಮಡಿವಾಳದ ಕೃಪಾನಿಧಿ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಆರೋಪ ಕೇಳಿಬಂದಿದೆ. ಕಳೆದ ವರ್ಷ ಜನಿವಾರದ ವಿಷಯದಲ್ಲಿ ವಿರೋಧಗಳು ವ್ಯಕ್ತವಾಗಿ, ವಿಷಯ ಹೈಕೋರ್ಟ್ ಮೆಟ್ಟಿಲೇರಿ ಮುಖ್ಯಮಂತ್ರಿಗಳು ಕೂಡ ಜನಿವಾರ ತೆಗೆಸದಂತೆ ಸೂಚನೆ ನೀಡಿದ್ದರು. ಆದರೂ, ನಿನ್ನೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಲು ಪರೀಕ್ಷಾ ಕೇಂದ್ರದ ಸಿಬ್ಬಂದಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಒಬ್ಬ ವಿದ್ಯಾರ್ಥಿಯ ಪ್ರಕಾರ, ಪ್ರವೇಶದ ವೇಳೆ ಜನಿವಾರವನ್ನು ಪರಿಶೀಲಿಸಿದ ಸಿಬ್ಬಂದಿ, ಅದನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ. ಇದು ಕೇವಲ ದಾರ, ಯಾವುದೇ ಮೆಟಲ್ ಇಲ್ಲ ಎಂದು ವಿದ್ಯಾರ್ಥಿ ಹೇಳಿದರೂ, ಅನುಮತಿ ಇಲ್ಲ, ತೆಗೆದು ಬನ್ನಿ ಇಲ್ಲವಾದರೆ ಬಿಡುವುದಿಲ್ಲ ಎಂದು ಹೇಳಲಾಗಿದೆ. ಪರೀಕ್ಷೆ ತಪ್ಪಿಹೋಗುವ ಭಯದಿಂದ ವಿದ್ಯಾರ್ಥಿ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದಾನೆ. ನಂತರ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಪೋಷಕರು ದೂರು ನೀಡಲು ಮುಂದಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
