ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ರೌಡಿಗಳ ವಿರುದ್ಧ ಸಮರ ಸಾರಿದ ಪೊಲೀಸ್ರು, ವಿಚಾರಣೆಗೆ ಬರದೇ ಆಟವಾಡ್ತಿದ್ದ ರೌಡಿ ಅರೆಸ್ಟ್​ – Kannada News

ಬೆಂಗಳೂರು, (ಜೂನ್ 08): ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಖಡಕ್ ಸೂಚನೆ ಬೆನ್ನಲ್ಲೇ ಪೊಲೀಸರು (Police), ರೌಡಿಗಳನ್ನು (Rowdy)  ಮಟ್ಟಹಾಕಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂತೆ ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಯನ್ನು ಬೆಂಗಳೂರು ಸಿಸಿಬಿ ಹೆಡೆಮುರಿಕಟ್ಟಿದೆ. ಹೌದು….ಕೋರ್ಟ್​​ ವಾರಂಟ್ ಆದೇಶ ಉಲ್ಲಂಘಿಸಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕೆ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ವಿನೋಬನಗರದ ರೌಡಿಶೀಟರ್ ಶಾಹಿದ್ ಪಾಷಾನನ್ನು ಬಂಧಿಸಿದ್ದಾರೆ.  ಶಾಹಿದ್ ಪಾಷಾ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು, ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ಆಟವಾಡುತ್ತಿದ್ದ. ಇದೀಗ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ ಬೆನ್ನಲ್ಲೇ ರೌಡಿಶೀಟರ್ ಶಾಹಿದ್ ಪಾಷಾ​​ನಿಗೆ ಬಿಸಿ ಮುಟ್ಟಿಸಿದ್ದಾರೆ.

ಸಿಎಂ ಸೂಚನೆ ಬೆನ್ನಲ್ಲೇ ರೌಡಿ ನಿಗ್ರಹ ದಳ ರಚನೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮಾರನೇ ದಿನವೇ ಉನ್ನತ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದ್ದು, ಆ ಸಭೆಯಲ್ಲಿ ಪ್ರಮುಖವಾಗಿ ರೌಡಿಗಳ ಆಟಾಟೋಪಗಳಿಗೆ ಬ್ರೇಕ್ ಹಾಕಬೇಕೆಂದು ಎಂದಿದ್ದರು. ಇದಕ್ಕೆ ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಆ್ಯಂಟಿ ರೌಡಿ ಸ್ಕ್ವಾಡ್ ರಚನೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ನಿನ್ನೆ(ಜೂನ್ 07) ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ಅವರು ಪ್ರತಿ ಪೊಲೀಸ್‌ ವಲಯ ಹಾಗೂ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ರಚಿಸುವಂತೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗೂ ರೌಡಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಾಗಿ ಪ್ರತಿ ಪೊಲೀಸ್‌ ವಲಯ ಮತ್ತು ಪೊಲೀಸ್‌ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ಆರಂಭಿಸುತ್ತಿರುವುದಾಗಿ ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

ರೌಡಿ ನಿಗ್ರಹ ದಳವು ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ, ಹೊಸ ರೌಡಿ ಪಟ್ಟಿ ತೆರೆಯಬೇಕು. ರೌಡಿ ಶೀಟರ್‌ಗಳ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಹೊಸ ರೌಡಿಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಗುಪ್ತಚರ ಮಾಹಿತಿ ಸಂಗ್ರಹಿಸಬೇಕು. ಪಿಎಆರ್‌, ಗೂಂಡಾ ಕಾಯಿದೆ, ಕೆಸಿಒಸಿಎ ಕಾಯಿದೆ ಮುಂತಾದ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಗಸ್ತು ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಳ್ಳಬೇಕು. ಅಪಾಯದ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಮತ್ತು ದಿಢೀರ್‌ ತಪಾಸಣೆ ನಡೆಸಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸಲೀಂ ಸೂಚಿಸಿದ್ದಾರೆ.

ಖಡಕ್ ನಿರ್ದೇಶನ ನೀಡಿದ್ದ ಸಿಎಂ

ರೌಡಿಶೀಟರ್‌ಗಳ ಪಟ್ಟಿಯನ್ನು ಕಡ್ಡಾಯವಾಗಿ ಸಿದ್ಧಪಡಿಸಿ ಅವರ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಬೇಕು. ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇರಬಾರದು ಎಂದು ಡಿಕೆ ಶಿವಕುಮಾರ್ ಅವರು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸಹ ರೌಡಿಗಳ ವಿರುದ್ಧ ಸಮರ ಸಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *