ಸಿಎಂ ಬಜೆಟ್​ಗೆ ಸಜ್ಜಾದ ಹೊತ್ತಲ್ಲೇ ಡಿಕೆ ಶಿವಕುಮಾರ್​ಗೆ ಅಸಮಾಧಾನ? ದೆಹಲೀಲಿ ದುಃಖ, ದುಮ್ಮಾನ ಚರ್ಚಿಸ್ತೀನೆಂದ ಡಿಸಿಎಂ – Kannada News | DK Shivakumar Skips Budget Meet, Heads to Delhi; Power Sharing Buzz Intensifies in Karnataka Congress

ಕಾಂಗ್ರೆಸ್​ನಲ್ಲಿ ಮತ್ತೆ ಭುಗಿಲೆದ್ದ ಕುರ್ಚಿ ಕದನ?Image Credit source: tv9

ಬೆಂಗಳೂರು, ಫೆಬ್ರವರಿ 10: ಕೆಲ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರ್ನಾಟಕ ಕಾಂಗ್ರೆಸ್ (Congress) ಅಧಿಕಾರ ಹಂಚಿಕೆ ಕದನವೀಗ ಮತ್ತೆ ತಾರಕಕ್ಕೇರಿದೆ. ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ ಪೂರ್ವಭಾವಿ ಸಭೆ ಕರೆದಿದ್ದಾರೆ. ಆದರೆ, ಈ ಸಭೆಗೆ ಗೈರಾಗುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಯತ್ತ ತೆರಳುತ್ತಿದ್ದಾರೆ. ಅಸ್ಸಾಂ ಚುನಾವಣೆ ಸಂಬಂಧ ಪ್ರಿಯಾಂಕಾ ಗಾಂಧಿ ಕರೆದ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳುವುದೇನೋ ನಿಜ. ಆದರೆ, ಡಿಕೆ ಶಿವಕುಮಾರ್​ ಜವಾಬ್ದಾರಿ ವಹಿಸಿಕೊಂಡಿರುವ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಬಜೆಟ್ ಪೂರ್ವಭಾವಿ ಸಭೆಯನ್ನೇ ಸಿದ್ದರಾಮಯ್ಯ ನಿಗದಿ ಮಾಡಿದ್ದಾರೆ. ಅಂದರೆ, ತಮ್ಮದೇ ಇಲಾಖೆಗಳಿಗೆ ಸಂಬಂಧಿಸಿದ ಸಭೆಗೆ ಡಿಸಿಎಂ ಗೈರಾಗಲಿದ್ದಾರೆ.

ಏತನ್ಮಧ್ಯೆ ಸಿಎಂ ಕರೆದ ಸಭೆಗೆ ಗೈರಾಗುವ ಮೂಲಕ ಡಿಕೆಶಿ ಸವಾಲ್ ಹಾಕಿದ್ರಾ? ಅಥವಾ ಸಿಎಂ ಬಜೆಟ್ ಮಂಡನೆಗೆ ಬೇಸರಗೊಂಡ್ರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಯಾಕೆಂದರೆ, ದೆಹಲಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಯಾರನ್ನೆಲ್ಲ ಭೇಟಿಯಾಗುತ್ತಾರೆ? ಏನೆಲ್ಲಾ ಮಾತುಕತೆ ನಡೆಸುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ನಾನು ಭೇಟಿ ಮಾಡುವ ಎಲ್ಲ ನಾಯಕರ ಹೆಸರುಗಳನ್ನು ಹೇಳಲು ಆಗಲ್ಲ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಡಿಕೆ ಶಿವಕುಮಾರ್ ಹೇಳಿದ್ದೇನು?

ನಾನು ಕೇವಲ ಡಿಸಿಎಂ ಮಾತ್ರವಲ್ಲ. ಪಕ್ಷದ ಅಧ್ಯಕ್ಷ ಕೂಡ ಹೌದು. ಹೀಗಾಗಿ, ದೆಹಲಿ ನಾಯಕರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಆಗ ನನ್ನ ಕಷ್ಟ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಎಲ್ಲಾ ಹೇಳುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಆಡಿದ ಕಷ್ಟ, ದುಃಖ, ಮ್ಮಾನ ಎಂಬ ಮಾತೇ ಈಗ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ವರಿಷ್ಠರ ಮುಂದೆ ಅಧಿಕಾರ ಹಸ್ತಾಂತರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ದುಃಖ ದುಮ್ಮಾನ ಹೇಳಿಕೊಳ್ತಾರಾ ಎಂಬ ಚರ್ಚೆ ನಡೆಯುತ್ತಿದೆ.

ಏತನ್ಮಧ್ಯೆ ‘ಈ ಅವಧಿಯಲ್ಲೇ ಡಿಕೆಶಿ ಸಿಎಂ ಆಗಬೇಕು’ ಎಂದು ನಿಮ್ಮ ಬೆಂಬಲಿಗರು ಹೇಳುತ್ತಿದ್ದಾರಲ್ಲವೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ‘ನಾನು ಸಿಎಂ ಆಗುವುದು ನಿಮಗೆ ಇಷ್ಟ ಇಲ್ಲವೇ’ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಬಜೆಟ್ ಪೂರ್ವಭಾವಿ ಸಭೆಗೆ ಗೈರು: ಡಿಕೆ ಶಿವಕುಮಾರ್ ಸ್ಪಷ್ಟನೆ ಏನು?

ಬಜೆಟ್ ಪೂರ್ವಭಾವಿ ಸಭೆಗೆ ಗೈರಾಗುತ್ತಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಡಿಕೆ ಶಿವಕುಮಾರ್, ಮುಖ್ಯಮಂತ್ರಿಗಳ ಅನುಮತಿ ಪಡೆದುಕೊಂಡೇ ದೆಹಲಿಗೆ ತೆರಳುತ್ತಿದ್ದೇನೆ. ನೀರಾವರಿ ಇಲಾಖೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರು. ನೀರಾವರಿ ಯೋಜನೆಗಳ ಬಗ್ಗೆ ನನಗಿಂತ ಸಿಎಂ ಅವರಿಗೆ ಹೆಚ್ಚು ಗೊತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸಿಎಂ ಪುತ್ರ ಯತೀಂದ್ರ ದಳ್ಳುರಿ: ತನ್ವೀರ್ ಸೇಠ್ ಕ್ಷೇತ್ರದಲ್ಲೂ ಹಸ್ತಕ್ಷೇಪದ ಆರೋಪ, ಆಕ್ಷೇಪ

ಒಟ್ಟಿನಲ್ಲಿ, ಕಾಂಗ್ರೆಸ್​ನಲ್ಲಿ ಅಧಿಕಾರ ಹಸ್ತಾಂತರದ ಸಮರ ದಿನೇ ದಿನೇ ತೀವ್ರ ಸ್ವರೂಪಕ್ಕೆ ತಿರುಗುವ ಲಕ್ಷಣಗಳು ಕಾಣಿಸುತ್ತಿವೆ. ಇಂದು ದೆಹಲಿಗೆ ತೆರಳುವ ಡಿಕೆ ಶಿವಕುಮಾರ್, ಅವರೇ ಹೇಳಿದಂತೆ ಅದೇನು ದುಃಖ, ಕಷ್ಟ, ನೋವುಗಳನ್ನು ವರಿಷ್ಠರ ಮುಂದೆ ಹೇಳಿಕೊಳ್ಳುತ್ತಾರೆ ಎಂ ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *