ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಇಟ್ಟು ನಟ ಕಮಲ್ ಹಾಸನ್; ಏನದು? – Kannada News | Kamal Haasan submits 6 demands to Tamil Nadu CM Vijay for cinema industry

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಟ, ರಾಜಕಾರಣಿ ದಳಪತಿ ವಿಜಯ್ (CM Vijay) ಅವರನ್ನು ಹಿರಿಯ ನಟ ಕಮಲ್ ಹಾಸನ್ ಮೇ 16ರಂದು ಭೇಟಿಯಾಗಿದ್ದಾರೆ. ಈ ಸೌಜನ್ಯಯುತ ಭೇಟಿಯ ಚಿತ್ರಗಳನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಕಮಲ್ ಹಾಸನ್ (Kamal Haasan), ತಮಿಳು ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿ, ಚಿತ್ರೋದ್ಯಮದ ಬೆಂಬಲಕ್ಕಾಗಿ 6 ಪ್ರಮುಖ ಬೇಡಿಕೆಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸಿಎಂ ವಿಜಯ್ ಅವರಿಗೆ ಸಲ್ಲಿಸಿದ್ದಾರೆ.

ಸಿಎಂ ವಿಜಯ್ ಭೇಟಿಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಕಮಲ್ ಹಾಸನ್, ‘ಇಂದು ಗೌರವಾನ್ವಿತ ತಮಿಳುನಾಡು ಮುಖ್ಯಮಂತ್ರಿ, ಸಹೋದರ ವಿಜಯ್ ಅವರನ್ನು ಖುದ್ದಾಗಿ ಭೇಟಿಯಾಗಿ ನನ್ನ ಶುಭ ಹಾರೈಕೆಗಳನ್ನು ತಿಳಿಸಿದೆ. ತಮಿಳುನಾಡಿನ ಏಳಿಗೆಗಾಗಿ ಅವರು ಹೊಂದಿರುವ ಹಲವು ಕನಸುಗಳನ್ನು ಉತ್ಸಾಹದಿಂದ ಹಂಚಿಕೊಂಡರು. ಅವರ ನಮ್ರತೆ ಮತ್ತು ಪ್ರೀತಿ ನನಗೆ ಹೆಮ್ಮೆ ತಂದಿದೆ. ವಿವಿಧ ಅಡೆತಡೆಗಳನ್ನು ಎದುರಿಸುತ್ತಿರುವ ತಮಿಳು ಚಿತ್ರರಂಗಕ್ಕೆ ಸರ್ಕಾರದ ಬೆಂಬಲದ ಅಗತ್ಯವಿದ್ದು, ಈ ನಿಟ್ಟಿನಲ್ಲಿ 6 ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಕಮಲ್ ಹಾಸನ್ ಸಲ್ಲಿಸಿರುವ 6 ಪ್ರಮುಖ ಬೇಡಿಕೆಗಳು ಇಲ್ಲಿವೆ:

1. ಸರ್ಕಾರಿ ಒಟಿಟಿ ಪ್ಲಾಟ್‌ಫಾರ್ಮ್ ಆರಂಭ: ತಮಿಳು ಪ್ರೇಕ್ಷಕರಿಗೆ ಕೈಗೆಟುಕುವ ಮತ್ತು ರಿಯಾಯಿತಿ ದರದಲ್ಲಿ ತಮಿಳು ಸಿನಿಮಾಗಳು, ಸ್ವತಂತ್ರ ಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ಅನುವಾಗುವಂತೆ ತಮಿಳುನಾಡು ಸರ್ಕಾರವೇ ಸ್ವಂತ ಒಟಿಟಿ ಪ್ಲಾಟ್‌ಫಾರ್ಮ್ ಪ್ರಾರಂಭಿಸಬೇಕು.

2. ಸ್ಥಳೀಯ ಸಂಸ್ಥೆಗಳ ಮನರಂಜನಾ ತೆರಿಗೆ ರದ್ದು: ಸದ್ಯ ಚಿತ್ರಮಂದಿರಗಳ ಮೇಲೆ ವಿಧಿಸಲಾಗುತ್ತಿರುವ ಶೇಕಡಾ 4ರಷ್ಟು ಸ್ಥಳೀಯ ಸಂಸ್ಥೆಗಳ ಮನರಂಜನಾ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.

3. ಬಲಿಷ್ಠ ಪೈರಸಿ ತಡೆ ತಂಡದ ರಚನೆ: ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿರುವ ಪೈರಸಿ ಹಾವಳಿಯನ್ನು ತಡೆಗಟ್ಟಲು ತಮಿಳುನಾಡು ಪೊಲೀಸ್ ಸೈಬರ್ ಕ್ರೈಮ್ ವಿಭಾಗದ ಅಡಿಯಲ್ಲಿ ಪ್ರತ್ಯೇಕ ಮತ್ತು ಬಲಿಷ್ಠ ‘ಆ್ಯಂಟಿ-ಪೈರಸಿ ತಂಡ’ವನ್ನು ರಚಿಸಬೇಕು.

4. ದಿನಕ್ಕೆ 5 ಪ್ರದರ್ಶನಗಳಿಗೆ ಅನುಮತಿ: ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಕಾನೂನುಬದ್ಧ ಅನುಮತಿ ನೀಡಬೇಕು. ಇದರಿಂದ ಚಿತ್ರಮಂದಿರಗಳ ಆದಾಯ ಹೆಚ್ಚಲಿದ್ದು, ಸಂಕಷ್ಟದಲ್ಲಿರುವ ಪ್ರದರ್ಶಕರ ವಲಯ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ.

5. ಎಂಟು ವಾರಗಳ ಬಳಿಕವೇ ಒಟಿಟಿಗೆ: ತಮಿಳುನಾಡಿನಲ್ಲಿ ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಕನಿಷ್ಠ 8 ವಾರಗಳ ನಂತರವಷ್ಟೇ ಒಟಿಟಿಯಲ್ಲಿ ಬಿಡುಗಡೆಯಾಗಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಬೇಕು.

6. ಚಿತ್ರ ನಿರ್ಮಾಣ ಪ್ರೋತ್ಸಾಹಕ ಯೋಜನೆ: ಭಾರತೀಯ ಚಲನಚಿತ್ರಗಳ ಚಿತ್ರೀಕರಣ ಶೇಕಡಾ 50ಕ್ಕಿಂತ ಹೆಚ್ಚು ತಮಿಳುನಾಡಿನಲ್ಲಿ ನಡೆದರೆ, ಅಂತಹ ಸಿನಿಮಾಗಳ ಒಟ್ಟು ಬಜೆಟ್‌ನ ಶೇಕಡಾ 10ರಷ್ಟು ಹಣವನ್ನು ಸರ್ಕಾರದಿಂದ ಪ್ರೋತ್ಸಾಹಕ ಧನವಾಗಿ ನೀಡುವ ಯೋಜನೆ ಜಾರಿಗೆ ತರಬೇಕು.

ಇದನ್ನೂ ಓದಿ: ವಿಜಯ್ ಜೊತೆಗಿನ ನಂಟಿನಿಂದ ಹೆಚ್ಚಿದ ತ್ರಿಶಾ ಕ್ರೇಜ್; ಗಗನಕ್ಕೇರಿದ ಸಂಭಾವನೆ

ತಮಿಳು ಚಿತ್ರರಂಗದ ಇಬ್ಬರು ಹಿರಿಯ ಕಲಾವಿದರು ರಾಜಕೀಯ ವೇದಿಕೆಯಲ್ಲಿ ಭೇಟಿಯಾಗಿ ಉದ್ಯಮದ ಏಳಿಗೆಗಾಗಿ ಚರ್ಚಿಸಿರುವುದು ಗಮನಾರ್ಹ ಸಂಗತಿ. ಸಿನಿಮಾ ರಂಗದ ಹಿನ್ನೆಲೆಯಿಂದಲೇ ಬಂದಿರುವ ಸಿಎಂ ವಿಜಯ್ ಅವರು ಹಿರಿಯ ನಟ ಕಮಲ್ ಹಾಸನ್ ಅವರ ಈ ಬೇಡಿಕೆಗಳಿಗೆ ಹೇಗೆ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *