2026 ರ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಎಂಬ ಬಿರುಗಾಳಿಯನ್ನು ಕಟ್ಟಿಹಾಕುವುದೇ ಎದುರಾಳಿ ತಂಡದ ಬೌಲರ್ಗಳ ದೊಡ್ಡ ಸವಾಲಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಉಗ್ರರೂಪಿಯಾಗುತ್ತಿರುವ ವೈಭವ್ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಇದರ ಪರಿಣಾಮವಾಗಿಯೇ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಕ್ವಾಲಿಫೈಯರ್ 2 ಆಡಲು ಸಿದ್ಧವಾಗಿದೆ. ಗುಜರಾತ್ ವಿರುದ್ಧದ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದರೆ ನೇರವಾಗಿ ಫೈನಲ್ ಆಡಲಿದೆ. ಅದು ಸಾಧ್ಯವಾಗಬೇಕಾದರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸ್ಫೋಟಕ ಇನ್ನಿಂಗ್ಸ್ ಆಡಬೇಕಾಗುತ್ತದೆ. ಆದರೆ ಅದಕ್ಕೂ ಮುನ್ನ ಮೊದಲ ಎಸೆತದಿಂದಲೇ ಸಿಕ್ಸರ್‌ಗಳ ಮಳೆ ಸುರಿಸಲು ನೋಡುವ ವೈಭವ್ಗೆ ಒಂದು ಓವರ್ನಲ್ಲಿ ಒಂದೇ ಒಂದು ಸಿಕ್ಸರ್ ಇರಲಿ, ಒಂದೇ ಒಂದು ರನ್ ಕೂಡ ನೀಡದ ಬೌಲರ್ ಬಗ್ಗೆ ತಿಳಿಯೋಣ.
11 ಎಸೆತಗಳಲ್ಲಿ 8 ರನ್ ಬಾರಿಸಿದ್ದ ವೈಭವ್
ವಾಸ್ತವವಾಗಿ ಏಪ್ರಿಲ್ 22 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ 32ನೇ ಲೀಗ್ ಪಂದ್ಯ ನಡೆದಿತ್ತು. ಅಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆಲುವು ಸಾಧಿಸಿತ್ತಾದರೂ, ವೈಭವ್ ಸೂರ್ಯವಂಶಿಗೆ ಒಂದಂಕಿ ದಾಟಲು ಸಾಧ್ಯವಾಗಿರಲಿಲ್ಲ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ಗೆ ಕೇವಲ 159 ರನ್ ಕಲೆಹಾಕಲಷ್ಟೇ ಸಾಧ್ಯವಾಯಿತು. ಆ ಪಂದ್ಯದಲ್ಲೂ ಆರಂಭಿಕನಾಗಿ ಆಡಿದ್ದ ವೈಭವ್ 11 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿ ಔಟಾಗಿದ್ದರು. ವೈಭವ್ ಅವರ ಈ ರನ್ ಬರಕ್ಕೆ ಕಾರಣವಾಗಿದ್ದ ಲಕ್ನೋ ತಂಡದ ವೇಗಿ ಮೊಹ್ಸಿನ್ ಖಾನ್.
ಮೇಡನ್ ಓವರ್ ಎಸೆದಿದ್ದ ಮೊಹ್ಸಿನ್
ರಾಜಸ್ಥಾನ್ ಇನ್ನಿಂಗ್ಸ್ನ 4ನೇ ಓವರ್ ಬೌಲ್ ಮಾಡುವ ಜವಾಬ್ದಾರಿ ಮೊಹ್ಸಿನ್ ಖಾನ್ಗೆ ನೀಡಲಾಯಿತು. ಆ ಓವರ್ನಲ್ಲಿ ಸ್ಟ್ರೈಕ್ನಲ್ಲಿ ಇದ್ದದ್ದು ವೈಭವ್ ಸೂರ್ಯವಂಶಿ. ಆ ಹೊತ್ತಿಗೆ ವೈಭವ್ 5 ಎಸೆತಗಳನ್ನು ಎದುರಿಸಿ 8 ರನ್ ಬಾರಿಸಿದ್ದರು. ಇದರಲ್ಲಿ 2 ಬೌಂಡರಿಗಳು ಸೇರಿದ್ದವು. ಹೀಗಾಗಿ ರನ್ ಗಳಿಸಬೇಕಾದ ಒತ್ತಡ ವೈಭವ್ ಮೇಲಿತ್ತು. ಆದರೆ ಇದಕ್ಕೆ ಮೊಹ್ಸಿನ್ ಖಾನ್ ಅವಕಾಶ ಮಾಡಿಕೊಡಲಿಲ್ಲ.
ಮೊಹ್ಸಿನ್ ಖಾನ್ ಎಸೆತದ 4ನೇ ಓವರ್ನಲ್ಲಿ ವೈಭವ್ಗೆ ಒಂದೇ ಒಂದು ರನ್ ಬಾರಿಸಲು ಸಾಧ್ಯವಾಗಲಿಲ್ಲ. ಈ ಓವರ್ನ 6 ಎಸೆತಗಳನ್ನು ವೈಭವ್ ಎದುರಿಸಿದರು. ಇದರಲ್ಲಿ ಮೊದಲ ಐದು ಎಸೆತಗಳಲ್ಲಿ ವೈಭವ್ ದೊಡ್ಡ ಹೊಡೆತಕ್ಕೆ ಕೈ ಹಾಕಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ವೈಭವ್ ಕವರ್ಸ್ ದಿಕ್ಕಿನಲ್ಲಿ ದಿಗ್ವೇಶ್ ರಾಠಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅಂದರೆ ಮೊಹ್ಸಿನ್ ಖಾನ್ ಮೇಡನ್ ಓವರ್ ಬೌಲ್ ಮಾಡುವುದರ ಜೊತೆಗೆ ವೈಭವ್ ಅವರ ವಿಕೆಟ್ ಕೂಡ ಉರುಳಿಸಿದರು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಎದುರು ಮೇಡನ್ ಓವರ್ ಬೌಲ್ ಮಾಡಿ ವಿಕೆಟ್ ಉರುಳಿಸಿದ ಏಕೈಕ ವೇಗಿ ಎಂಬ ದಾಖಲೆ ಮೊಹ್ಸಿನ್ ಖಾನ್ ಹೆಸರಿನಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ