ಪಾಟ್ನಾ, ಜುಲೈ 27: ನೀಟ್ (NEET-UG) ಪರೀಕ್ಷೆಯ ಅಕ್ರಮಗಳು ಮತ್ತು ಇತರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಲಾಗುವುದು ಎಂದು ಬಿಹಾರ ಸರ್ಕಾರ ಘೋಷಿಸಿದೆ. ಇದರ ಜೊತೆಗೆ, ಪ್ರತಿಭಟನೆಯ ವೇಳೆ ವಶಕ್ಕೆ ಪಡೆಯಲಾದ ಅಥವಾ ಬಂಧಿಸಲಾದ ವ್ಯಕ್ತಿಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು. ಮುಂದಿನ ದಿನಗಳಲ್ಲೂ ಅವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಬಿಹಾರ ಸರ್ಕಾರ ಇಂದು ರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
“ಜುಲೈ 26ರ ಸಂಜೆ 6 ಗಂಟೆಗೆ ಮುಂಚಿತವಾಗಿ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಎಲ್ಲಾ ಚಾಲ್ತಿಯಲ್ಲಿರುವ ಎಫ್‌ಐಆರ್‌ಗಳು, ಕ್ರಿಮಿನಲ್ ದೂರುಗಳು ಅಥವಾ ಶೋಕಾಸ್ ನೋಟಿಸ್‌ಗಳನ್ನು ಹಿಂಪಡೆಯುವ ಕಾನೂನು ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲಾಗುವುದು” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬಿಹಾರದಾದ್ಯಂತ ಸುಮಾರು 700 ಜನರ ಬಂಧನ:
ನೀಟ್ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ರಾಜ್ಯವ್ಯಾಪಿ ಬಂದ್ ಜಾರಿಗೆ ತರಲು ಯತ್ನಿಸಿದ 694 ಜನರನ್ನು ಕಳೆದ ವಾರ ವಶಕ್ಕೆ ಪಡೆಯಲಾಗಿತ್ತು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ 339 ಜನರು ಅಪ್ರಾಪ್ತರು ಮತ್ತು ವಿದ್ಯಾರ್ಥಿಗಳಾಗಿದ್ದು, ವಯಸ್ಸಿನ ಪರಿಶೀಲನೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈ ಮಧ್ಯೆ, ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಉಳಿದ 355 ಬಂಧಿತರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು.
ಇದನ್ನೂ ಓದಿ: ಕೇಸ್ಗಳನ್ನು ಹಿಂಪಡೆಯದಿದ್ದರೆ ನಾಳೆಯಿಂದ ಮತ್ತೆ ಪ್ರತಿಭಟನೆ; ಕೇಂದ್ರ ಸರ್ಕಾರಕ್ಕೆ ಸಿಜೆಪಿ ಎಚ್ಚರಿಕೆ
ಜುಲೈ 25ರಂದು ನಡೆದ ಬಂದ್ ವೇಳೆ ನಡೆದ ಘರ್ಷಣೆಯಲ್ಲಿ 91 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಬಿಹಾರ ಪೊಲೀಸರು ಮಾಹಿತಿ ನೀಡಿದ್ದಾರೆ. 13 ಜನಸಾಮಾನ್ಯರಿಗೂ ಗಾಯಗಳಾಗಿದ್ದವು. ಪ್ರತಿಭಟನಾಕಾರರು ಸರ್ಕಾರದ 13 ವಾಹನಗಳನ್ನು ಜಖಂಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಜೆಪಿ ಎಚ್ಚರಿಕೆ:
“ಆತ್ಮೀಯ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೇ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೊಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದದ ಸಂಪೂರ್ಣ ಉಲ್ಲಂಘನೆಯಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಬಿಹಾರ ಮತ್ತು ಬಂಗಾಳದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ನೂರಾರು ಜನರಿಗೆ ಕಿರುಕುಳ ನೀಡಲಾಗುತ್ತಿದೆ. ದೆಹಲಿಯಲ್ಲಿ ಪ್ರತಿಭಟನಾಕಾರರಿಗೆ ಅಗತ್ಯ ನೆರವು ನೀಡುತ್ತಿದ್ದ ಸ್ವಯಂಸೇವಕರನ್ನು ವಶಕ್ಕೆ ಪಡೆಯುತ್ತಿರುವ ಬಗ್ಗೆ ಹಲವು ವರದಿಗಳು ಬರುತ್ತಿವೆ” ಎಂದು ಅಶುತೋಶ್ ರಾಂಕಾ ಹೇಳಿದ್ದರು.
ಇದನ್ನೂ ಓದಿ: ಪ್ರತಿಭಟನಾಕಾರರ ಕಾನೂನು ನೆರವಿಗೆ ಸಿಜೆಪಿಯಿಂದ ವೆಬ್ಸೈಟ್ ಆರಂಭ; 1 ಕೋಟಿ ರೂ. ದೇಣಿಗೆ ನೀಡಿದ ಕಪಿಲ್ ಸಿಬಲ್
“ಪ್ರತಿಭಟನಾಕಾರರ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು, ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು. ನಮ್ಮ ಒಪ್ಪಂದದಂತೆ ದೆಹಲಿ ಪೊಲೀಸರು ಅಥವಾ ಕೇಂದ್ರ ತನಿಖಾ ಸಂಸ್ಥೆಗಳು ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳ ಪೊಲೀಸರು ಭವಿಷ್ಯದಲ್ಲಿ ಯಾವುದೇ ಎಫ್‌ಐಆರ್ ದಾಖಲಿಸಬಾರದು ಎಂದು ನಾವು ಆಗ್ರಹಿಸುತ್ತೇವೆ. ಅದಕ್ಕೆ ತಪ್ಪಿದರೆ ನಾವು ಮತ್ತೆ ಧರಣಿ ಕುಳಿತುಕೊಳ್ಳಲು ನಿರ್ಧರಿಸಬೇಕಾಗುತ್ತದೆ. ಕಾನೂನು ಪ್ರಕರಣಗಳಿಗೆ ಸಂಬಂಧಿಸಿದ ಲಿಖಿತ ಒಪ್ಪಂದದ ಪ್ರತಿ ಹಾಗೂ ಭಾರತ ಸರ್ಕಾರದೊಂದಿಗಿನ ಕಾಲಮಿತಿಯ ವಿವರಗಳನ್ನು ನಾಳೆಯೊಳಗೆ ನಮಗೆ ತಲುಪಿಸಬೇಕೆಂದು ನಾವು ಆಗ್ರಹಿಸುತ್ತೇವೆ” ಎಂದು ಅವರು ಬರೆದಿದ್ದರು. ಅದರ ಬೆನ್ನಲ್ಲೇ ಬಿಹಾರ ಸರ್ಕಾರದ ಈ ನಿರ್ಧಾರ ತೆಗೆದುಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
