ಸಿಜೆ ರಾಯ್ ಮಾದರಿಯಲ್ಲಿ ಮತ್ತೋರ್ವ ಆತ್ಮಹತ್ಯೆ: ಐಟಿಗೆ ಹೆದರಿದ್ರಾ ಬಿಬಿಎಂಪಿ ನಿವೃತ್ತ ಚೀಫ್ ಇಂಜಿನಿಯರ್? – Kannada News | BBMP retired chief engineer parameshwarayya Commits Suicide In Bengaluru Like CJ roy

ಬೆಂಗಳೂರು, (ಫೆಬ್ರವರಿ 25): ಐಟಿ ಅಧಿಕಾರಿಗಳ ದಾಳಿ (IT Raid) ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಬಲಿ ಪಡೆದಿದೆ. ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವಾಗಲೇ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಐಟಿ ದಾಳಿಯಿಂದ ಖಿನ್ನತೆಗೊಳಗಾಗಿ ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ (BBMP retired Chief Engineer) ಪರಮೇಶ್ವರಯ್ಯ ಅವರು ಇಂದು (ಫೆಬ್ರವರಿ 25) ಬೆಳ್ಳಂಬೆಳಗ್ಗೆ ಕೋರಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಕ್ರಮ ಆಸ್ತಿ ಸಂಬಂಧ ಸಿಸಿಬಿಯಲ್ಲಿ ದಾಖಲಾಗಿರುವ ಎಫ್​​ಐಆರ್​​​ ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಿಬಿಎಂಪಿಯ ಮಹಾದೇವಪುರ ವಲಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಮೇಶ್ವರಯ್ಯ (ಪರಮೇಶ್ವರ್), ಕೋರಮಂಗಲದಲ್ಲಿ ವಾಸವಿದ್ದರು. ಕಳೆದ 20 ದಿನಗಳ ಹಿಂದೆಯಷ್ಟೇ ಇವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ದಾಳಿಯ ನಂತರ ಪರಮೇಶ್ವರಯ್ಯ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಿಜೆ ರಾಯ್‌ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!

ಪರಮೇಶ್ವರಯ್ಯ ಮನೆ ಮೇಲೆ ಐಟಿ ದಾಳಿಯಾಗಿತ್ತು

2021ರಲ್ಲಿ ಗುತ್ತಿಗೆದಾರ ಅನಿಲ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಆ ವೇಳೆ BBMP ಗುತ್ತಿಗೆದಾರ ಅನಿಲ್ ನಿವಾಸದಲ್ಲಿ ಸೂಟ್ಕೇಸ್‌ನಲ್ಲಿ 3 ಲಾಕರ್‌ ಕೀ 1.35 ಲಕ್ಷ ನಗದು, 275.98 ಗ್ರಾಂ ಚಿನ್ನಾಭರಣ ಪತ್ತೆಯಾಗಿತ್ತು. ಅಲ್ಲದೇ ಹಲವು ಜಮೀನು, ಸೈಟ್ ದಾಖಲಾತಿ ಪತ್ತೆಯಾಗಿದ್ದವು. ಬಳಿಕ ಅನಿಲ್ ಕುಮಾರ್ ನನ್ನು ವಿಚಾರಣೆಗೊಳಪಡಿಸಿದಾಗ ಬಿಬಿಎಂಪಿ ಮಹದೇವಪುರ ವ್ಯಾಪ್ತಿಯ ಮುಖ್ಯ ಇಂಜಿನಿಯರ್ ಆಗಿದ್ದ ಪರಮೇಶ್ವರಯ್ಯ ಅವರು ಹೆಸರು ಹೇಳಿದ್ದರು. ಇದೆಲ್ಲವೂ ಪರಮೇಶ್ವರಯ್ಯಗೆ ಸೇರಿದ್ದು ಎಂದು ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ 2021ರ ಡಿಸೆಂಬರ್ 4ರಂದು ಪರಮೇಶ್ವರಯ್ಯ ಮನೆ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪರಮೇಶ್ವರಯ್ಯ ಈ ವೇಳೆ ಸೂಟ್ಕೇಸ್‌ ತನ್ನದೇ ಎಂದು ಒಪ್ಪಿಕೊಂಡಿದ್ದರು. ಬಳಿಕ 2021ರ ಡಿಸೆಂಬರ್ 6ರಂದು ಬ್ಯಾಂಕ್ ಲಾಕರ್‌ಗಳಲ್ಲಿ ಪರಿಶೀಲಿಸಿದ್ದ ಐಟಿ ಅಧಿಕಾರಿಗಳಿಗೆ 3 ಬ್ಯಾಂಕ್ ಲಾಕರ್‌ಗಳಲ್ಲಿ 86.35 ಲಕ್ಷ ರೂ. ನಗದು ಸಹ ಪತ್ತೆಯಾಗಿತ್ತು. ಲಾಕರ್ ಜಿ.ಕಿಶೋರ್ ನಾಯ್ಡು ಎಂಬುವವರ ಹೆಸರಲ್ಲಿ ಇತ್ತು. ಲಾಕರ್ ಕೀ ಪರಮೇಶ್ವರಯ್ಯ ಪತ್ನಿ ಮಹಾಲಕ್ಷ್ಮೀ ಹೆಸರಿನಲ್ಲಿತ್ತು.

ತನಿಖೆಗೆ ಹೆದರಿ ಪರಮೇಶ್ವರಯ್ಯ ಆತ್ಮಹತ್ಯೆ ಶಂಕೆ

ಇನ್ನು 2012ರಲ್ಲಿ ಪರಮೇಶ್ವರಯ್ಯ ಆಸ್ತಿ ಮೌಲ್ಯ 29.64 ಲಕ್ಷ ರೂ. ಇತ್ತು. ಆದ್ರೆ, 2021ರಲ್ಲಿ ಪರಮೇಶ್ವರಯ್ಯ ಆಸ್ತಿ ಮೌಲ್ಯ 5.85 ಕೋಟಿಗೆ ಹೆಚ್ಚಳವಾಗಿತ್ತು. ಬೆಂಗಳೂರು, ತುಮಕೂರಿನಲ್ಲಿ ನಿವೇಶನ, ಕೋರಮಂಗಲದಲ್ಲಿ ಸೈಟ್, ಮನೆ, ಅಪಾರ್ಟ್‌ಮೆಂಟ್‌ ಹೊಂದಿದ್ದರು. ನಂತರ ಐಟಿ ಅಧಿಕಾರಿಗಳ ತನಿಖೆಯಲ್ಲಿ ಪರಮೇಶ್ವರಯ್ಯ ಭ್ರಷ್ಟಾಚಾರ ಮಾಡಿರುವುದು ಪತ್ತೆಯಾಗಿತ್ತು. ಹೀಗಾಗಿ ಸಿಸಿಬಿಯಲ್ಲಿ 2026ರ ಜನವರಿ 30ರಂದು ಎಫ್ಐಆರ್ ದಾಖಲಾಗಿತ್ತು. ಇದರಿಂದ ಖಿನ್ನತೆಗೊಳಗಾಗಿ ಪರಮೇಶ್ವರಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪರಮೇಶ್ವರಯ್ಯ ಅವರ ಈ ಸಾವು ಇತ್ತೀಚೆಗಷ್ಟೇ ನಡೆದಿದ್ದ ಖ್ಯಾತ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವನ್ನು ನೆನಪಿಸುತ್ತಿದೆ. ಸಿಜೆ ರಾಯ್ ಕೂಡ IT ಅಧಿಕಾರಿಗಳು ನಡೆಸಿದ್ದ ಸತತ ದಾಳಿ ಮತ್ತು ವಿಚಾರಣೆಗೆ ಹೆದರಿ ಮಾನಸಿಕವಾಗಿ ಜರ್ಜರಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪರಮೇಶ್ವರಯ್ಯ ಅದೇ ರೀತಿ ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *