ಭಾರತದಲ್ಲಿ (India) ದೇವರುಗಳ ಹೆಸರುಗಳನ್ನು ಮನುಷ್ಯರಿಗೆ, ಉದ್ಯಮಗಳಿಗೆ ಹೀಗೆ ಎಲ್ಲದಕ್ಕೂ ಇಡುವ ರೂಢಿ. ದೇವರುಗಳ ಹೆಸರುಗಳನ್ನು ಇರಿಸಿದರೆ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ. ನಮ್ಮಲ್ಲಿ ಬಾರುಗಳಿಗೆ, ಕಸದ ಗಾಡಿಗಳಿಗೂ ದೇವರ ಹೆಸರುಗಳನ್ನು ಇರಿಸಲಾಗಿದೆ. ಆದರೆ ಇತ್ತೀಚೆಗೆ ಸಿನಿಮಾಗಳಿಗೆ ದೇವರ ಹೆಸರ ಇರಿಸಿದರೆ ಸೆನ್ಸಾರ್ ಮಂಡಳಿಯವರು ತಕರಾರು ತೆಗೆಯಲು ಆರಂಭಿಸಿದಂತಿದ್ದಾರೆ. ಇತ್ತೀಚೆಗಿನ ಕೆಲ ಸಿನಿಮಾಗಳಿಗೆ ಅವು ದೇವರುಗಳ ಹೆಸರೆಂಬ ಕಾರಣಕ್ಕೆ ಹೆಸರುಗಳನ್ನು ಬದಲಾವಣೆ ಮಾಡಿಸಲಾಗಿದೆ.
ವರಲಕ್ಷ್ಮಿ ಶರತ್ಕುಮಾರ್ ನಟನೆಯ ‘ಸರಸ್ವತಿ’ ಹೆಸರಿನ ನಾಳೆ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾದ ಹೆಸರನ್ನು ಕಡ್ಡಾಯವಾಗಿ ಬದಲು ಮಾಡಲೇ ಬೇಕೆಂದು ಸೆನ್ಸಾರ್ ಮಂಡಳಿ ಪಟ್ಟು ಹಿಡಿದು, ಹೆಸರನ್ನು ‘ಎಸ್ ಸರಸ್ವತಿ’ ಎಂದು ಬದಲಾವಣೆ ಮಾಡಿಸಿದೆ. ಅಸಲಿಗೆ ಇದು ಸರಸ್ವತಿ ಹೆಸರಿನ ಸಾಮಾನ್ಯ ಮಹಿಳೆಯೊಬ್ಬಳ ಕತೆ. ಆದರೆ ಸೆನ್ಸಾರ್ ಮಂಡಳಿ ಅತಿ ಸೂಕ್ಷ್ಮತೆ ಪ್ರದರ್ಶಿಸಿ ಸಿನಿಮಾದ ಹೆಸರನ್ನು ಪದಲು ಮಾಡಿ, ತನ್ನ ಬುದ್ಧಿವಂತಿಕೆ ಪ್ರದರ್ಶಿಸಿದೆ.
ಇದನ್ನೂ ಓದಿ:‘ದಿ ಕೇರಳ ಸ್ಟೋರಿ 2’ ಸಿನಿಮಾದ ಶೀರ್ಷಿಕೆ ಬಗ್ಗೆ ತಕರಾರು; ರಾಜ್ಯದ ಹೆಸರು ಕೈಬಿಡಲು ಆಗ್ರಹ
ಇದು ಮೊದಲೇನೂ ಅಲ್ಲ ಈ ಹಿಂದೆ ‘ಹೇ ಭಗವಾನ್’ ಹೆಸರಿನ ಸಿನಿಮಾ ಒಂದು ಇತ್ತೀಚೆಗೆ ಬಿಡುಗಡೆ ಆಗಿತ್ತು. ಆ ಸಿನಿಮಾದ ಹೆಸರಿನಲ್ಲಿ ‘ಭಗವಾನ್’ ಹೆಸರನ್ನು ಸಹ ಸೆನ್ಸಾರ್ ಮಂಡಳಿ ಬದಲಾಯಿಸಿತು. ಸಿನಿಮಾದ ಹೆಸರನ್ನು ‘ಹೇ ಭಗವಂತ್’ ಎಂದು ಬದಲಾಯಿಸಿ ಬಿಡುಗಡೆ ಮಾಡಲಾಯ್ತು. ಒಂದೊಮ್ಮೆ ಸಿನಿಮಾದ ಕತೆಯು ದೇವರ ಕುರಿತಾಗಿಯೇ ಇದ್ದರೆ, ಅಥವಾ ದೇವರ ಭಕ್ತನ ಕುರಿತಾದ ಕತೆ ಇದ್ದರೆ ದೇವರು ಹೆಸರಿಟ್ಟುಕೊಳ್ಳುವುದು ಮಾತ್ರವಲ್ಲ, ಹೆಸರನ್ನು ತಿರುಚಿ ಬಳಸಿದರೂ ಸಹ ಸೆನ್ಸಾರ್ ಮಂಡಳಿ ಆಕ್ಷೇಪ ಎತ್ತುವುದಿಲ್ಲ. ‘ಹನುಮ್ಯಾನ್’ ಸಿನಿಮಾ ಇದಕ್ಕೆ ಉದಾಹರಣೆ.
ಸೆನ್ಸಾರ್ ಮಂಡಳಿ ಇತ್ತೀಚೆಗೆ ಅತಿಯಾದ ಸೂಕ್ಷ್ಮತೆ ಪ್ರದರ್ಶಿಸುತ್ತಿದೆ ಅದರಲ್ಲೂ ಧರ್ಮದ ವಿಷಯಗಳಲ್ಲಿ ಅತಿಯಾದ ಸೂಕ್ಷ್ಮತೆ ಪ್ರದರ್ಶಿಸುತ್ತಿದೆ. ಆದರೆ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಸಿನಿಮಾಗಳಿಗೆ ಸುಲಭವಾಗಿ ಪ್ರಮಾಣ ಪತ್ರಗಳು ಸಿಗುತ್ತಿವೆ. ಆದರೆ ಅಧಿಕಾರವನ್ನು ಪ್ರಶ್ನಿಸುವ, ವ್ಯವಸ್ಥೆಯನ್ನು ಟೀಕೆ ಮಾಡುವ ಸಿನಿಮಾಗಳಿಗೆ ಸಮಸ್ಯೆ ಎದುರಾಗುತ್ತಿವೆ. ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೂ ಸಮಸ್ಯೆ ಎದುರಾಗಿದ್ದು, ಅದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
