ಸಿನಿಮಾವನ್ನೂ ಮೀರಿಸುವ ವಂಚನೆ: ಸತ್ತವರ ಹೆಸರು ಬಳಸಿ ಆದಿಚುಂಚನಗಿರಿ ಮಠದ 120 ಕೋಟಿ ರೂ. ಆಸ್ತಿ ಎಗರಿಸಿದ ಖದೀಮರು! – Kannada News | Adichunchanagiri Mutt Land Scam: 11 Arrested, Including 6 Govt Officials for Rs 120 Crore Fraud

ಬೆಂಗಳೂರು, ಜುಲೈ 14: ನಗರದ ಆದಿಚುಂಚನಗಿರಿ ಮಠಕ್ಕೆ ಸೇರಿದ ಬರೋಬ್ಬರಿ 120 ಕೋಟಿ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ (Fake Documents) ಸೃಷ್ಟಿಸಿ ವಂಚಿಸಿದ್ದ ಜಾಲವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಈ ಹೈಟೆಕ್ ಮತ್ತು ರೋಚಕ ವಂಚನೆ ಪ್ರಕರಣದಲ್ಲಿ ತೊಡಗಿದ್ದ 6 ಜನ ಸರ್ಕಾರಿ ಅಧಿಕಾರಿಗಳು ಹಾಗೂ ರೌಡಿ ಶೀಟರ್ ಸೇರಿದಂತೆ ಒಟ್ಟು 11 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

30 ವರ್ಷದ ಹಿಂದಿನ ಮಠದ ಜಾಗಕ್ಕೆ ಸ್ಕೆಚ್

ಸುಮಾರು 30 ವರ್ಷಗಳ ಹಿಂದೆ ಭಕ್ತರು ಆದಿಚುಂಚನಗಿರಿ ಮಠಕ್ಕೆ ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೇ ನಂಬರ್ 43 ರಲ್ಲಿ ಒಟ್ಟು 45 ಎಕರೆ ಜಮೀನನ್ನು ಕಾಣಿಕೆಯಾಗಿ ನೀಡಿದ್ದರು. ಈ ಪೈಕಿ 6 ಎಕರೆ ಬೆಲೆಬಾಳುವ ಜಮೀನನ್ನು ಕಬಳಿಸಲು ನೆಲಮಂಗಲ ಮೂಲದ ಮಾಸ್ಟರ್ ಮೈಂಡ್ ನರೇಶ್ ಗೌಡ ಮತ್ತು ಬ್ರೋಕರ್ ಆರೋಗ್ಯಸ್ವಾಮಿ ಸ್ಕೆಚ್ ಹಾಕಿದ್ದ.

ಸತ್ತವರ ಸಮಾಧಿ ಹುಡುಕಿ ನಕಲಿ ವಂಶವೃಕ್ಷ ಸೃಷ್ಟಿ

ಆರೋಪಿಗಳು ವಂಚನೆಗೆ ಬಳಸಿದ ದಾರಿ ಯಾವುದೇ ಸಿನಿಮಾಕ್ಕೂ ಕಡಿಮೆ ಇಲ್ಲ.ಮಠದ ಜಮೀನಿನ ಮೂಲ ಮಾಲೀಕರ ಹೆಸರೇ ಇರುವ ಸತ್ತ ವ್ಯಕ್ತಿಯೊಬ್ಬ ಇವರಿಗೆ ಬೇಕಾಗಿತ್ತು. ಇದಕ್ಕಾಗಿ ಸ್ಮಶಾನಗಳಿಗೆ ಅಲೆದಾಡಿದ ಖದೀಮರು, ಕೊನೆಗೆ ಮೂಲ ಮಾಲೀಕನ ಹೆಸರೇ ಇದ್ದ ವ್ಯಕ್ತಿಯ ಸಮಾಧಿಯೊಂದನ್ನು ಪತ್ತೆ ಮಾಡಿದ್ದರು. ಆ ಸಮಾಧಿಯ ಮೇಲಿದ್ದ ಹೆಸರಿನ ಆಧಾರದ ಮೇಲೆ ಅವರ ಕುಟುಂಬವನ್ನು ಸಂಪರ್ಕಿಸಿದ್ದರು.

ಅಲ್ಲೇ ಇವರಿಗೆ ಬೇಗೂರು ಪೊಲೀಸ್ ಠಾಣೆಯ ರೌಡಿ ಶೀಟರ್ ಫ್ರಾನ್ಸಿಸ್ ಸಿಕ್ಕಿದ್ದ. ಫ್ರಾನ್ಸಿಸ್ ತಂದೆಯ ಹೆಸರು ಹಾಗೂ ಮಠದ ಜಮೀನಿನ ಮೂಲ ಮಾಲೀಕನ ಹೆಸರು, ವಯಸ್ಸು ಮ್ಯಾಚ್ ಆಗಿದ್ದನ್ನೇ ಬಂಡವಾಳ ಮಾಡಿಕೊಂಡ ನರೇಶ್ ಗೌಡನ ಟೀಮ್, ಫ್ರಾನ್ಸಿಸ್ ಹಾಗೂ ಜೋಸ್ವಾನ್ ಇಬ್ಬರೂ ಅಣ್ಣ-ತಂಗಿ ಎಂದು ಸುಳ್ಳು ವಂಶವೃಕ್ಷ ಸೃಷ್ಟಿಸಿದ್ದರು.

ಲಂಚ ಪಡೆದು ಸಾಥ್ ನೀಡಿದ ಸರ್ಕಾರಿ ಅಧಿಕಾರಿಗಳು

ಈ ನಕಲಿ ದಾಖಲೆಗಳಿಗೆ ಲಕ್ಷಾಂತರ ರೂಪಾಯಿ ಹಣ ಪಡೆದು ಬೇಗೂರು ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ರೆವಿನ್ಯೂ ಇನ್ಸ್ಪೆಕ್ಟರ್ ಕಿರಣ್ ಮತ್ತು ಡೆಪ್ಯೂಟಿ ತಹಶೀಲ್ದಾರ್ ದೀಪಕ್ ನಕಲಿ ದಾಖಲೆ ಪತ್ರ ಮಾಡಿಕೊಟ್ಟಿದ್ದರು. ಇದನ್ನು ಪಡೆದ ಕೆಂಗೇರಿಯ ವಿಲೇಜ್ ಅಕೌಂಟೆಂಟ್ ಸತೀಶ್ ಕುಮಾರ್, ರೆವಿನ್ಯೂ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯೂಟಿ ತಹಶೀಲ್ದಾರ್, ಅದು ನಕಲಿ ಎಂದು ಗೊತ್ತಿದ್ದರೂ ಖಾತೆ ಮಾಡಿಕೊಟ್ಟಿದ್ದರು. ಆಸ್ತಿ ಕೈ ಸೇರಿದ ತಕ್ಷಣ ಆರೋಪಿಗಳು ಅದನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಮಾಡಿಕೊಂಡಿದ್ದರು.

ಮಠದಿಂದ ದೂರು: ಬಯಲಾಯ್ತು ವಂಚನೆ

ಕೊನೆಗೆ ಜಮೀನು ಹಸ್ತಾಂತರವಾಗಿರುವ ವಿಚಾರ ತಿಳಿದು ಆದಿಚುಂಚನಗಿರಿ ಮಠದ ವತಿಯಿಂದ ಕೆಂಗೇರಿ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ವಂಚನೆ ಬಯಲಾಗಿದೆ. ಸದ್ಯ 6 ಅಧಿಕಾರಿಗಳು ಸೇರಿದಂತೆ 11 ಜನರನ್ನು ಜೈಲಿಗಟ್ಟಲಾಗಿದ್ದು, ತಲೆಮರೆಸಿಕೊಂಡಿರುವ ಮಾಸ್ಟರ್ ಮೈಂಡ್ ನರೇಶ್ ಗೌಡನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *