ಲಕ್ಷ್ಮಿ ಹೆಬ್ಬಾಳ್ಕರ್ (lakshmi Hebbalkar) ಕರ್ನಾಟಕದ ಜನಪ್ರಿಯ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರು. ಪ್ರಸ್ತುತ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಲವು ವರ್ಷಗಳಿಂದಲೂ ಸಕ್ರಿಯ ರಾಜಕೀಯದಲ್ಲಿದ್ದಾರೆ. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿನಿಮಾ ನಿರ್ಮಾಪಕಿಯೂ ಆಗುತ್ತಿದ್ದಾರೆ. ಮೊಮ್ಮಗಳ ಹೆಸರಲ್ಲಿ ಸಿನಿಮಾ ನಿರ್ಮಾಣ ಪ್ರಾರಂಭಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಮಾಣ ಸಂಸ್ಥೆಗೆ ಐರಾ ಫಿಲಮ್ಸ್ ಎಂದು ಹೆಸರಿಟ್ಟಿದ್ದಾರೆ. ನಿರ್ಮಾಪಕಿಯಾಗಿ ‘ಅಣ್ಣಾ ಫ್ರಂ ಮೆಕ್ಸಿಕೊ’ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಅನಾವರಣ ಆಗಿದೆ.
‘ಅಣ್ಣಾ ಫ್ರಂ ಮೆಕ್ಸಿಕೊ’ ಸಿನಿಮಾನಲ್ಲಿ ಡಾಲಿ ಧನಂಜಯ್ ನಾಯಕ ಆಗಿದ್ದು, ಈ ಹಿಂದೆ ಡಾಲಿಯ ‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಗುರು ಅವರು ಈ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಾವು ಸಿನಿಮಾ ನಿರ್ಮಾಣಕ್ಕೆ ಬಂದಿದ್ದೇಕೆ ಎಂಬುದನ್ನು ಚುಟುಕಾಗಿ ವಿವರಿಸಿದರು.
ಸಿನಿಮಾದ ಟೀಸರ್ ಬಗ್ಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ‘ಟೀಸರ್ ಬಹಳ ಚೆನ್ನಾಗಿತ್ತು, ಬಹಳ ರಿಚ್ ಆಗಿತ್ತು. ಅದರಲ್ಲೂ ಧನಂಜಯ್ ಅವರ ಕೊರಳಿನಲ್ಲಿದ್ದ ಕರ್ನಾಟಕದ ಲಾಕೆಟ್ ನೋಡಿ ಬಹಳ ಖುಷಿ ಆಯ್ತು. ಟೀಸರ್ ನೋಡಿದರೆ ಸಿನಿಮಾ ಎಷ್ಟು ರಿಚ್ ಆಗಿರಬಹುದು ಎಂಬ ಅಂದಾಜು ಸಿಗುತ್ತಿದೆ. ಡಾಲಿ ಪ್ರತಿಬಾರಿಯಂತೂ ಅದ್ಭುತವಾಗಿ ನಟಿಸಿದ್ದಾರೆ’ ಎಂದರು.
ಇದನ್ನೂ ಓದಿ:‘ಉತ್ತರಕಾಂಡ’ ಸಿನಿಮಾ ನಿಂತಿದ್ದು ಏಕೆ? ಮುಂದೇನು? ಡಾಲಿ ಧನಂಜಯ್ ಉತ್ತರ
‘ಚಿತ್ರರಂಗ ಹೊಸದು ನನಗೆ, ಚಿಕ್ಕಂದಿನಿಂದಲೂ ಚಿತ್ರರಂಗದ ಬಗ್ಗೆ ಆಸೆ, ಕುತೂಹಲ ಇದ್ದೇ ಇದೆ. ಬಹಳ ದೊಡ್ಡ ದೊಡ್ಡ ನಟರನ್ನು ನೋಡಿಕೊಂಡು ಬೆಳೆದು ಬಂದವಳು. ರಾಜ್ಕುಮಾರ್, ವಿಷ್ಣುವರ್ಧನ್, ಅನಂತ್ನಾಗ್, ಶಂಕರ್ನಾಗ್, ಜಯಮಾಲ, ಜಯಪ್ರಧಾ ಇನ್ನೂ ಹಲವರನ್ನು ನೋಡಿ ಬೆಳೆದವಳು. ನಾನೂ ಸಹ ಎಲ್ಲರಂತೆ ಮಧ್ಯಮ ವರ್ಗದಿಂದ ಬಂದವಳು, ಕನ್ನಡ ಚಿತ್ರರಂಗಕ್ಕೆ ಏನಾದರೂ ಮಾಡಬೇಕು, ಅಲ್ಲಿಯೂ ಕೆಲಸ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ನನಗೆ ಇತ್ತು. ಈಗ ಡಾಲಿ ಧನಂಜಯ್ ಅವರು ಒಳ್ಳೆಯ ಕತೆ ಹಿಡಿದುಕೊಂಡು ಬಂದರು. ನೀವು ನಿರ್ಮಾಣ ಮಾಡಲೇ ಬೇಕು ಎಂದಾಗ ಇಲ್ಲ ಎನ್ನಲಾಗಲಿಲ್ಲ’ ಎಂದಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್.
‘ಕನ್ನಡ ಚಿತ್ರರಂಗದ ಬಹಳ ಎತ್ತರಕ್ಕೆ ಬೆಳೆಯುತ್ತಿದೆ. ವಿಶ್ವಮಟ್ಟದಲ್ಲಿ ಕನ್ನಡ ಪ್ರೇಕ್ಷಕರು ಇದ್ದಾರೆ. ಹಾಗಾಗಿ ಇದು ಒಳ್ಳೆಯ ಸಂದರ್ಭ ಎಂಬ ಕಾರಣಕ್ಕೆ ನಾವು ಇನ್ನು ಕೆಲವರೊಟ್ಟಿಗೆ ಸೇರಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ನನ್ನ ಸಹೋದರ ಚನ್ನರಾಜ್ ಹಟ್ಟಿಜೋಳಿ ಅವರು ಎಲ್ಲವನ್ನೂ ನಿಭಾಯಿಸಲಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ಇನ್ನೊಂದು ಸಿನಿಮಾ ಅನ್ನೂ ಸಹ ಮಾಡಲಿದ್ದೇವೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
