ವಿಜಯಪುರ, ಏಪ್ರಿಲ್ 24: ಅಲಿಯಾಬಾದ್ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ರಾಜು ಖರಿ (48) ಏಪ್ರಿಲ್ 14ರಂದು ಭೀಕರವಾಗಿ ಕೊಲೆಯಾಗಿದ್ದರು. ಅಲಿಯಾಬಾದ್ ಬಳಿಯ ಕೈಗಾರಿಕಾ ಪ್ರದೇಶದ ಬಳಿ ಸಿನಿಮಾ ಸ್ಟೈಲ್ನಲ್ಲಿ ದಾಳಿ ನಡೆಸಿದ್ದ ಆರೋಪಿಗಳು ರಾಜು ಅವರನ್ನು ಬರ್ಬರವಾಗಿ ಕೊಂದಿದ್ದರು. ಪ್ರಕರಣ ಸಂಬಂಧ ಆರೋಪಿಗಳ ಕೈಗೆ ಕೋಳ ತೊಡಿಸಿರುವ ಪೊಲೀಸರು, ಆಸ್ತಿ ವಿವಾದವೇ ಡೆಡ್ಲಿ ಮರ್ಡರ್ಗೆ ಕಾರಣ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆ ಮೂಲಕ ಗ್ರಾಮ ಪಂಚಾಯತಿಯ ಮಾಜಿ ಸದಸ್ಯನ ಕೊಲೆಗೆ ಅಸಲಿ ಕಾರಣ ಏನೆಂಬುದು ಬಹಿರಂಗಗೊಂಡಿದೆ.
ತಮ್ಮ ತೋಟದ ಮನೆಯಿಂದ ವಿಜಯಪುರದತ್ತ ಪ್ರಯಾಣ ಮಾಡುತ್ತಿದ್ದ ರಾಜು ಖರಿ ಅವರ ಥಾರ್ ಜೀಪ್ಗೆ ಮೊದಲು ಟಿಪ್ಪರ್ ಡಿಕ್ಕಿ ಹೊಡೆಸಲಾಗಿತ್ತು. ಅಪಗಾತದ ತೀವ್ರತೆಗೆ ಥಾರ್ ಜೀಪ್ ಮುಂಭಾಗ ಜಖಂ ಆಗಿದ್ದು, ಇದೇ ವೇಳೆ ವಾಹನದ ಬಳಿ ಆಗಮಿಸಿದ್ದ ಹಂತಕರು ಜೀಪ್ ಡೋರ್ನ ದೊಡ್ಡ ಕಲ್ಲಿನಿಂದ ಜಜ್ಜಿ ಒಡೆದು, ರಾಜು ತಲೆ ಮತ್ತು ಎದೆ ಭಾಗಕ್ಕೆ 6 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಕಂಟ್ರಿ ಪಿಸ್ತೂಲ್ನಿಂದ ಆರೋಪಿಗಳು ಮಾಡಿದ್ದ ಈ ಫೈರಿಂಗ್ಗೆ ರಾಜು ಉಸಿರು ಚೆಲ್ಲಿದ್ದರು. ಅದಾದ ಬಳಿಕವೂ ಅವರ ತಲೆಗೆ ಕಲ್ಲಿನಿಂದ ಹೊಡೆದು ಹಂತಕರು ಎಸ್ಕೇಪ್ ಆಗಿದ್ದರು. ಈ ಭೀಕರ ಕೊಲೆ ಇಡೀ ಜಿಲ್ಲೆಯನ್ನೇ ನಡುಗಿಸಿ ಬಿಟ್ಟಿತ್ತು. ಹೀಗಾಗಿ ಪ್ರಕರಣ ಸಂಬಂಧ ಎಸ್ಪಿ ಲಕ್ಷ್ಮಣ ನಿಂಬರಗಿ ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಹಂತಕರ ಬೆನ್ನುಬಿದ್ದ ಖಾಕಿ ಪಡೆ ಒಟ್ಟು 6 ಮಂದಿಯನ್ನೀಗ ಬಂಧಿಸಿದೆ. ಅಲಿಯಾಬಾದಿಯ ಪಾಂಗ್ರೂನ್ ದೊಡ್ಡಿಯ ಪ್ರಮುಖ ಆರೋಪಿ ಅಬಾಶ್ಯಾ ಕೊಡ್ಲೆಕರ, ಮಾನೇನದೊಡ್ಡಿಯ ಅಬಾಶ್ಯಾ ಮಾನೆ, ಅಲಿಯಾಬಾದಿನ ವಾಗೀಶ ಪೋಳ, ಅಲಿಯಾಬಾದ ತಾಂಡಾದ ಖಂಡೂಬಾ ತಾಂಡೆ, ಪಾಂಗ್ರೂಬನ್ ದೊಡ್ಡಿಯ ಜಾಲಿಂದರ್ ಹಕ್ಕೆ, ಪಾಂಗ್ರೂನ್ ದೊಡ್ಡಿಯ ಮುರುಗು ಹಕ್ಕೆ ಬಂಧಿತರಾಗಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು; 6 ಸುತ್ತು ಫೈರಿಂಗ್ ಮಾಡಿ ಗ್ರಾ.ಪಂ ಸದಸ್ಯನ ಹತ್ಯೆ
ಇನ್ನು ಕೊಲೆಗೆ ಆಸ್ತಿ ವಿಚಾರವೇ ಕಾರಣ ಎನ್ನಲಾಗಿದೆ. ಖರಿ ಕುಟುಂಬಕ್ಕೆ ಸೇರಿದ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ರಾಜೂ ಖರಿ ಭಾಗಿಯಾಗಿದ್ದ. ಇದೇ ವಿಚಾರವಾಗಿ ಪ್ರಮುಖ ಆರೋಪಿ ಅಬಾಶ್ಯಾ ಕೋಪಕೊಂಡಿದ್ದ. ಇದೇ ಸಿಟ್ಟಲ್ಲಿ ಆರೋಪಿಗಳು ರಾಜು ಕೊಲೆ ಮಾಡಿರುವ ಬಗ್ಗೆ ಎಸ್ಪಿ ಮಾಹಿತಿ ನೀಡಿದ್ದಾರೆ. ಬಂಧಿತರಿಂದ 2 ಕಂಟ್ರಿ ಪಿಸ್ತೂಲ್ ಗಳು, 7 ಮೊಬೈಲ್, 2 ಮೋಟರ್ ಸೈಕಲ್ ಗಳು, ಟಿಪ್ಪರ್ ಮತ್ತು ಕಾರನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 6:33 pm, Fri, 24 April 26
