ಸಿರಾಜ್ ಸಿಡಿಲಬ್ಬರ…. ಬ್ಯಾಟ್ ಚೆಕ್ ಮಾಡಿದ ಶ್ರೀಲಂಕಾ ಆಟಗಾರರು! – Kannada News | Sri Lankan Players Playfully Check Siraj’s Bat After Cameo

ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಗೂ ಮುನ್ನ ಕೊಲಂಬೊದಲ್ಲಿ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಶ್ರೀಲಂಕಾ ಇಲೆವೆನ್​ ವಿರುದ್ಧ ನಡೆದ ಈ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿರಾಜ್ ಕೇವಲ 15 ಎಸೆತಗಳಲ್ಲಿ 32 ರನ್ ಚಚ್ಚುವ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟಿದ್ದರು.

ಸಿರಾಜ್ ಸಿಡಿಲಬ್ಬರ:

ಕೊಲಂಬೊದಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ತಂಡಕ್ಕೆ ಗೆಲ್ಲಲು 45 ಓವರ್​ಗಳಲ್ಲಿ 207 ರನ್​ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಕೊನೆಯ 8 ಎಸೆತಗಳಲ್ಲಿ 27 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದ ಮೊಹಮ್ಮದ್ ಸಿರಾಜ್  6, 1, 6, 6, 6, 4 ಚಚ್ಚುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಈ ಮೂಲಕ ಭಾರತ ತಂಡಕ್ಕೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

ಇತ್ತ ಕೇವಲ 15 ಎಸೆತಗಳನ್ನು ಎದುರಿಸಿದ ಸಿರಾಜ್ 4 ಭರ್ಜರಿ ಸಿಕ್ಸರ್ ಹಾಗೂ ಒಂದು ಫೋರ್​ನೊಂದಿಗೆ ಅಜೇಯ 32 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಬ್ಯಾಟ್ ಚೆಕ್ ಮಾಡಿ ಲಂಕಾ ಆಟಗಾರರು!

ಸಿರಾಜ್ ಅವರ ಈ ಅನಿರೀಕ್ಷಿತ ಬ್ಯಾಟಿಂಗ್ ಪರಾಕ್ರಮವನ್ನು ಕಂಡು ಶ್ರೀಲಂಕಾ ಆಟಗಾರರು ಆಶ್ಚರ್ಯಚಕಿತರಾದರು. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ  ಮಾಡುವಾಗ, ಶ್ರೀಲಂಕಾದ ಫೀಲ್ಡರ್‌ಗಳು ಸಿರಾಜ್ ಅವರನ್ನು ಸುತ್ತುವರಿದರು. ತಮಾಷೆಯಾಗಿ ಅವರ ಕೈಲಿದ್ದ ಬ್ಯಾಟ್ ಅನ್ನು ಕಸಿದುಕೊಂಡು, “ಇದರಲ್ಲಿ ಏನೋ ಮ್ಯಾಜಿಕ್ ಇದೆ” ಎಂಬಂತೆ ತಿರುಗಿಸಿ ಪರಿಶೀಲಿಸಲು ಆರಂಭಿಸಿದರು. ಸಿರಾಜ್ ಕೂಡ ನಗುತ್ತಲೇ ತಮ್ಮ ಬ್ಯಾಟ್ ಅನ್ನು ಅವರಿಗೆ ತೋರಿಸಿದರು. ಇದೀಗ ಈ ಬ್ಯಾಟ್ ಪರಿಶೀಲನೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಶ್ರೀಲಂಕಾ ಸರಣಿ ಯಾವಾಗ?

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದರೆ, ದ್ವಿತೀಯ ಪಂದ್ಯವು ಆಗಸ್ಟ್ 23 ರಂದು ಕೊಲಂಬೋದ ಎಸ್‌ಎಸ್‌ಸಿ ಮೈದಾನದಲ್ಲಿ ಜರುಗಲಿದೆ.

Source link

Leave a Reply

Your email address will not be published. Required fields are marked *