ರೌಡಿಶೀಟರ್ ಸೇರಿ ಐವರ ಬಂಧನImage Credit source: tv9
ಬೆಂಗಳೂರು, ಜುಲೈ 15: ಬೆಂಗಳೂರು (Bengaluru) ನಗರದಲ್ಲಿ ಸಿಸಿಬಿ ಪೊಲೀಸರ (CCB Police) ಸೋಗಿನಲ್ಲಿ ಜಿಮ್ ಟ್ರೈನರ್‌ನನ್ನು ಅಪಹರಿಸಿ ಹಣ ವಸೂಲಿ ಮಾಡಲು ಯತ್ನಿಸಿದ್ದ ಗ್ಯಾಂಗ್‌ವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ರೌಡಿಶೀಟರ್ ತ್ರಿವೇಣ್ ಕುಮಾರ್ ಅಲಿಯಾಸ್ ತಿರುಮಲ ಸೇರಿದಂತೆ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜಿಮ್ ಟ್ರೈನರ್ ಮಿಥುಲ್ ಆಟೋದಲ್ಲಿ ತೆರಳುತ್ತಿದ್ದ ವೇಳೆ, ‘ನಾವು ಸಿಸಿಬಿ ಪೊಲೀಸರು’ ಎಂದು ಪರಿಚಯಿಸಿಕೊಂಡ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿಗೆ ಎಳೆದುಕೊಂಡು ಹೋಗಿದ್ದರು. ಬಳಿಕ, ‘500 ಕೆಜಿ ಗಾಂಜಾ ತರಿಸಿದ್ದೀಯಾ’ ಎಂದು ಬೆದರಿಸಿ, ಅವರ ಮೊಬೈಲ್ ಹಾಗೂ ಬ್ಯಾಗ್ ಕಸಿದುಕೊಂಡಿದ್ದರು.
ಪೊಲೀಸ್ ಠಾಣೆಯೊಳಕ್ಕೇ ಹೋಗಿ ಬಂದಿದ್ದ ಆರೋಪಿಗಳು!
ಇದಾದ ಬಳಿಕ, ಎಲ್‌ಎಸ್‌ಡಿ ಸ್ಟ್ರಿಪ್ಸ್ ಇಟ್ಟು ಫೋಟೋ ತೆಗೆದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಾಟಕೀಯವಾಗಿ ಜೆ.ಪಿ.ನಗರ ಪೊಲೀಸ್ ಠಾಣೆ ಬಳಿ ಕಾರು ನಿಲ್ಲಿಸಿ, ಇಬ್ಬರು ಆರೋಪಿಗಳು ಠಾಣೆಯೊಳಗೆ ಹೋಗಿ ಬಂದು, ‘ಸಾಹೇಬರು ಬ್ಯುಸಿಯಾಗಿದ್ದಾರೆ’ ಎಂದು ಹೇಳುವ ಮೂಲಕ ತಮ್ಮನ್ನು ನಿಜವಾದ ಪೊಲೀಸ್ ಅಧಿಕಾರಿಗಳೆಂದು ನಂಬಿಸುವ ಪ್ರಯತ್ನ ಮಾಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಸಂತ್ರಸ್ತನನ್ನು 4 ಗಂಟೆ ಕಾರಿನಲ್ಲಿ ಬೆಂಗಳೂರಿನ ವಿವಿಧೆಡೆ ಸುತ್ತಾಡಿಸಿದ್ದ ಆರೋಪಿಗಳು
ಆರೋಪಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ಮಿಥುಲ್ ಅವರನ್ನು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿ, 5 ಲಕ್ಷ ರೂಪಾಯಿ ನೀಡದಿದ್ದರೆ ಡ್ರಗ್ಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಜೂನ್ 22ರಂದು ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ: ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ
ಬಂಧಿತರನ್ನು ರೌಡಿಶೀಟರ್ ತ್ರಿವೇಣ್ ಕುಮಾರ್ ಅಲಿಯಾಸ್ ತಿರುಮಲ, ರಂಜಿತ್ ರಾವ್, ನಮಿತ್, ಪ್ರೇಮ್ ಸಾಯಿ ಹಾಗೂ ಶಾಂತಕುಮಾರ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಈ ಹಿಂದೆಯೂ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
