ಸಚಿವ ಪ್ರಲ್ಹಾದ್ ಜೋಶಿImage Credit source: tv9 kannada
ಹುಬ್ಬಳ್ಳಿ, ಜೂನ್ 20: ಬಿಜೆಪಿ (bjp) ಶಾಸಕರಿಂದ ಅಡ್ಡಮತದಾನ ಆಗಿರುವುದು ದುರ್ದೈವದ ಸಂಗತಿ. ದುಡ್ಡಿನ ಆಸೆಗಾಗಿ ಕ್ರಾಸ್ ವೋಟಿಂಗ್ ಮಾಡಿದ್ದಾರೆ. ಸದ್ಯ ಕೇಂದ್ರೀಯ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ತನಿಖೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಸೀಕ್ರೆಟ್ ಆಗಿ ಮಾಡಿದ್ದೇವೆ ಅನ್ಕೊಂಡಿದ್ದಾರೆ, ಆದರೆ ಕೆಲವೇ ದಿನಗಳಲ್ಲಿ ಯಾರು ಮಾಡಿದ್ದು ಅಂತಾ ಗೊತ್ತಾಗಲಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಖ್ಯಾಂಶಗಳು
- ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ
- ದುಡ್ಡಿನ ಆಸೆಗಾಗಿ ಕ್ರಾಸ್ ವೋಟಿಂಗ್ ಎಂದ ಜೋಶಿ
- ತನಿಖೆ ನಡೆಸಲು ಸತ್ಯಶೋಧನಾ ಸಮಿತಿ ರಚನೆ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಿಷ್ಟು
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪಾರ್ಟಿ ಪರವಾಗಿ ಗೆದ್ದ ಮೇಲೆ ಪಾರ್ಟಿ ಪರವಾಗಿ ವೋಟ್ ಹಾಕಬೇಕು. ಅವರ ವಿಶ್ವಾಸವನ್ನು ತೆಗೆದುಕೊಳ್ಳಬೇಕು ಅಂತಿಲ್ಲ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ದೆಹಲಿಗೆ ಬರುವುದಾಗಿ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕತ್ವ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೋಶಿ ತಿರುಗೇಟು
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಹೇಳಿಕೆಗಳು ಹಳೇ ಗ್ರಾಮಾಫೋನ್ ರೀತಿ ಇವೆ. ಅವರ ಪತ್ರಕ್ಕೆ ಯಾವುದೇ ಬೆಲೆಯಿಲ್ಲ. ಡಿಕೆ ಶಿವಕುಮಾರ್ ನಂತರ ತಾನು ಮುಖ್ಯಮಂತ್ರಿ ಆಗಬೇಕು ಅಂದುಕೊಂಡಿದ್ದಾರೆ. ಆರ್ಎಸ್ಎಸ್ಗೆ ಬೈದವರಿಗೆ ಸಿಎಂ ಸ್ಥಾನ ಕೊಡುತ್ತಾರೆ ಅಂತಾ ಅಂದುಕೊಂಡಿದ್ದಾರೆ. ಆರ್ಎಸ್ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಕೇಳುವ ಅಧಿಕಾರ ಇಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ನಾನು ಇಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ರೇಸ್ನಲ್ಲಿ ನಾನು ಇಲ್ಲ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜ್ಯದಲ್ಲಿ ಅನೇಕರು ಸಮರ್ಥರು ಇದ್ದಾರೆ ಎಂದು ಹೇಳಿದರು.
ಮಳೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಲ್ಹಾದ್ ಜೋಶಿ
ಇನ್ನು ಮಳೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಲ್ಹಾದ್ ಜೋಶಿ, ಶೇಕಡ 40 ರಷ್ಟು ಮಳೆ ಕೊರತೆ ಇದೆ ಅಂತ ಐಎಂಡಿ ವರದಿ ನೀಡಿದೆ. ನಮ್ಮ ಬಳಿ ದೊಡ್ಡ ಮಟ್ಟದ ಆಹಾರ ಧಾನ್ಯದ ಸಂಗ್ರಹವಿದೆ. ಕುಡಿಯುವ ನೀರು, ಮೇವಿಗೆ ತೊಂದರೆ ಆಗಲಿದ್ದು, ಸಿಎಂ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಆದಷ್ಟು ಬೇಗನೆ ಸಂಪುಟ ವಿಸ್ತರಣೆ ಮಾಡಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ. ಬೆಂಗಳೂರು ಅಧೋಗತಿ ಮಾಡಿ ಅವರು ಸಿಎಂ ಆಗಿದ್ದಾರೆ. ಅದನ್ನು ನೋಡಿದರೆ ರಾಜ್ಯವು ಹಾಗೆ ಆಗುವ ರೀತಿ ಕಾಣುತ್ತದೆ. ಈ ಸರ್ಕಾಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ? ಹೆಚ್ಡಿ ಕುಮಾರಸ್ವಾಮಿ ಏನಂದರು ನೋಡಿ
ಶಿವಸೇನೆ ಮತ್ತು ಟಿಎಂಸಿಯಿಂದ ನಮ್ಮ ಪಕ್ಷಕ್ಕೆ ಬರಲು ಕಾರಣ, ಆ ಪಕ್ಷಗಳಲ್ಲಿ ನಮಗೆ ಭವಿಷ್ಯವಿಲ್ಲಾ ಅಂತ ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಕರ್ನಾಟಕದ ವಿದ್ಯಮಾನಗಳನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಕ್ಕೆ, ಪ್ರಿಯಾಂಕ್ ಖರ್ಗೆ ಮಂತ್ರಿಯಾಗಿದ್ದಾರೆ, ಇಲ್ಲದಿದ್ದರೆ ಅವರು ಮಂತ್ರಿ ಆಗುತ್ತಿರಲಿಲ್ಲ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
