ಸುಖ ನಿದ್ರೆಗಾಗಿ ಈ ಗಿಡಮೂಲಿಕೆಗಳು ಸಹಕಾರಿ ಎನ್ನುತ್ತಾರೆ ಡೈಸಿ ಬೋಪಣ್ಣ – Kannada News | Daisy Bopanna’s advice for better sleep

ಇಂದಿನ ಒತ್ತಡದ ಜೀವನ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಣ್ಣು ಮುಚ್ಚಿ ಮಲಗಿದರೂ ತಡ ರಾತ್ರಿಯವರೆಗೂ ನಿದ್ರೆ ಆವರಿಸೋದೇ ಇಲ್ಲ ಎಂದು ದೂರುತ್ತಿರುತ್ತಾರೆ. ಈ ನಿದ್ರೆಯ ಕೊರತೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹಾಗಾಗಿ ಸುಖ ನಿದ್ರೆಗಾಗಿ ತಜ್ಞರು ಅನೇಕಾರು ಸಲಹೆಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಗಾಳಿಪಟ ಬೆಡಗಿ ಡೈಸಿ ಬೋಪಣ್ಣ (Daisy Bopanna) ಅವರು ಉತ್ತಮ ನಿದ್ರೆಗಾಗಿ ಒಂದಷ್ಟು ಸಲಹೆಗಳನ್ನು ನೀಡಿದ್ದು, ಈ ಕೆಲವು ಗಿಡಮೂಲಿಕೆಗಳ ಸೇವನೆಯಿಂದ ಮಗುವಿನಂತೆ ಆರಾಮದಾಯಕವಾಗಿ ನಿದ್ರಿಸಬಹುದು ಎಂದು ಹೇಳಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತಮ ನಿದ್ರೆಗೆ ಡೈಸಿ ಬೋಪಣ್ಣ ನೀಡಿದ ಸಲಹೆಗಳಿವು:

ಇತ್ತೀಚಿನ ದಿನಗಳಲ್ಲಿ ಅನೇಕರು ಉತ್ತಮ ನಿದ್ರೆ ಪಡೆಯಲು ಒದ್ದಾಡುತ್ತಿದ್ದಾರೆ. ಇನ್ನೂ ಕೆಲವರು ಒಳ್ಳೆಯ ನಿದ್ರೆ ಮಾಡಿದರೂ ಸುಸ್ತನ್ನು ಅನುಭವಿಸುತ್ತಾರೆ. ಈ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಒಂದಷ್ಟು ಗಿಡಮೂಲಿಕೆಗಳ ಬಗ್ಗೆ ಡೈಸಿ ಬೋಪಣ್ಣ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:‌

ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುವ ಗಿಡಮೂಲಿಕೆಗಳು:

ಜಾಯಿಕಾಯಿ ಪುಡಿ: ಜಾಪತ್ರೆ ಅಥವಾ ಜಾಯಿಕಾಯಿ ಪುಡಿಯ ಸೇವನೆಯಿಂದ ಉತ್ತಮ ನಿದ್ರೆ ಪಡೆಯಬಹುದು ಎನ್ನುತ್ತಾರೆ ಡೈಸಿ ಬೋಪಣ್ಣ. ಜಾಯಿಕಾಯಿಯಲ್ಲಿ ಮೆಗ್ನೇಸಿಯಮ್‌ ಇದ್ದು, ಇದು ವಿಶ್ರಾಂತಿ ಮತ್ತು ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಒತ್ತಡ ಮತ್ತು ಆತಂಕವನ್ನು ಸಹ ನಿವಾರಿಸುತ್ತದೆ. ಹಾಗಾಗಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಚಿಟಿಕೆ ಜಾಯಿಕಾಯಿ ಪುಡಿ ಮತ್ತು ಚಿಟಿಕೆ ಅರಶಿನ ಪುಡಿಯನ್ನು ಬೆರೆಸಿ ಸೇವನೆ ಮಾಡುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು.

ಅಶ್ವಗಂಧ ಪುಡಿ: ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಲು ಅಶ್ವಗಂಧದ ಪುಡಿ ಸಹಾಯ ಮಾಡುತ್ತದೆ ಎನ್ನುತ್ತಾರೆ ಡೈಸಿ ಬೋಪಣ್ಣ. ನಿಮಗೇನಾದರೂ ಒತ್ತಡ, ಆತಂಕ, ನಿದ್ರಾಹೀನತೆಯ ಸಮಸ್ಯೆ ಇದ್ದರೆ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಚಿಟಿಕೆ ಅಶ್ವಗಂಧವನ್ನು ಬೆರೆಸಿ ಸೇವನೆ ಮಾಡಿದರೆ ಉತ್ತಮ.

ಇದನ್ನೂ ಓದಿ: ಸ್ನಾನ ಮಾಡುವ ಸಂದರ್ಭದಲ್ಲಿ ಮೊದಲು ದೇಹದ ಯಾವ ಭಾಗಕ್ಕೆ ನೀರು ಹಾಕಬೇಕು ಗೊತ್ತೇ?

ಒಂದೆಲಗ ಮತ್ತು ಜಟಮಾನ್ಸಿ ಟೀ: ಬ್ರಾಹ್ಮಿ ಶಾಂತ ನಿದ್ರೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇನ್ನೂ ಜಟಮಾನ್ಸಿ ಮೂಲಿಕೆ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಹಾಗಾಗಿ ಉತ್ತಮ ನಿದ್ರೆಗಾಗಿ ಈ ಎರಡು  ಗಿಡಮೂಲಿಕೆಗಳ ಟೀ ಕುಡಿಯೋದು ಬೆಸ್ಟ್‌ ಎನ್ನುತ್ತಾರೆ ಡೈಸಿ ಬೋಪಣ್ಣ.

ತಗರ ಬೇರು: ತಗರ ಬೇರು ಒಂದು ಪ್ರಮುಖ ಆಯುರ್ವೇದ ಸಸ್ಯವಾಗಿದ್ದು, ಇದು ನಿದ್ರಾಹೀನತೆ, ಮಾನಸಿಕ ಒತ್ತಡ ಮತ್ತು ಆತಂಕವನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಆರಾಮದಾಯಕ ನಿದ್ರೆಗೆ ಸಹಾಯ ಮಾಡುತ್ತದೆ. ಈ ಬೇರಿನ ಪುಡಿಯನ್ನು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಮಲಗುವ ಮುನ್ನ ಕುಡಿದರೆ ಮಗುವಿನಂತೆ ಆರಾಮದಾಯಕವಾಗಿ ನಿದ್ರಿಸಬಹುದು.

ಈ ಗಿಡಮೂಲಿಕೆಗಳ ಸೇವನೆಯಿಂದ ಮಗುವಿನಂತೆ ಆರಾಮದಾಯಕವಾಗಿ ನಿದ್ರಿಸಬಹುದು ಎಂದು ಹೇಳಿದ್ದಾರೆ, ಜೊತೆಗೆ ಯಾವುದೇ ಪೂರಕಗಳನ್ನು ಸೇವನೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ ಎಂದಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *