ಸುಡು ಬಿಸಿಲಿಗೆ ಬಸವಳಿದ ಮೂಕ ಜೀವಿಗಳಿಗೆ ಈ ರೀತಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ – Kannada News | How can we care stray animals and birds during the summer?

ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಆರೈಕೆImage Credit source: Getty Images

ಮನುಷ್ಯರಾದ ನಾವು ಏನೋ ಸರ್ಕಸ್‌ ಮಾಡಿ ಈಗಿರುವ ಸುಡು ಬಿಸಿಲ ತಾಪದಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದೇವೆ. ದಾಹ ನೀಗಿಸಿಕೊಳ್ಳಲು ನೀರು, ಎಳನೀರು ಅಂತೆಲ್ಲಾ ಬಗೆ ಬಗೆಯ ಪಾನೀಯಗಳನ್ನು ಸೇವನೆ ಮಾಡುತ್ತೇವೆ. ಆದರೆ ಬೇಸಿಗೆಯ ತಾಪಕ್ಕೆ (Summer heat) ಬಸವಳಿದ ಮೂಕ ಪ್ರಾಣಿ ಪಕ್ಷಿಗಳು ನಮಗೆ ನೀರು, ಆಹಾರ ಕೊಡಿ, ಸುಡು ಬಿಸಿಲಿಗೆ ಬಸವಳಿದಿದ್ದೇವೆ ರಕ್ಷಣೆ ಕೊಡಿ ಎಂದು ಹೇಗೆ ಕೇಳಿಯಾವು? ಅದರಲ್ಲೂ ಹಲವು ಕಡೆ ನೀರಿನ ಮೂಲಗಳೇ ಬರಿದಾಗಿದ್ದು, ನೀರು ಆಹಾರ ಸಿಗದೆ ಪ್ರಾಣಿ-ಪಕ್ಷಿ ಸಂಕುಲವೇ ತತ್ತರಿಸಿ ಹೋಗಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲಾ ಬಲ್ಲವರಾದ ನಾವು ಮೂಕ ಜೀವಿಗಳ ರಕ್ಷಣೆಗಾಗಿ ಸಣ್ಣ ಅಳಿಲು ಸೇವೆಯನ್ನು ಮಾಡಬಹುದು. ಹೀಗೆ ಈ ಬೇಸಿಗೆಯಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ಯಾವ ರೀತಿ ಎಲ್ಲಾ ನಿಮ್ಮ ಕೈಲಾದಷ್ಟು ಸಹಾಯ ಮಾಡಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬೇಸಿಗೆಯಲ್ಲಿ ಬಸವಳಿದ ಪ್ರಾಣಿ-ಪಕ್ಷಿಗಳಿಗೆ ನಾವು ಹೇಗೆಲ್ಲಾ ಸಹಾಯ ಮಾಡಬಹುದು?

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ: ಈ ಸುಡು ಬೇಸಿಗೆಯಲ್ಲಿ ಬಾಯಾರಿಕೆ ತೀರಾ ಹೆಚ್ಚು. ಹಾಗಾಗಿ ಮನೆಯ ಕಾಂಪೌಂಡ್‌ ಹೊರಗಡೆ, ಕಾಂಪೌಂಡ್‌ ಮೇಲೆ ಸಣ್ಣ ಬಕೆಟ್‌ಗಳಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ನೀರಿಡಿ.  ಹೀಗೆ ಮಾಡುವುದರಿಂದ ಪ್ರಾಣಿ ಪಕ್ಷಿಗಳಿಗೂ ಕುಡಿಯಲು ಸಾಕಷ್ಟು ಪ್ರಮಾಣದ ನೀರು ಸಿಗುತ್ತದೆ. ಇದರಿಂದ ಸುಡುವ ಶಾಖದಲ್ಲೂ ಪ್ರಾಣಿಗಳಿಗೆ ದೇಹದ ನೀರಿನಾಂಶ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಪ್ರಾಣಿಗಳಿಗೆ ನೆರಳು ಒದಗಿಸಿ: ಈ ಸುಡು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳು ನೆರಳನ್ನು ಹರಸುತ್ತಾ ಅಲೆದಾಡುತ್ತಿರುತ್ತವೆ. ಹೀಗಿರುವಾಗ ನಿಮ್ಮ ಮನೆಯ ಹೊರಗಡೆ ಪುಟ್ಟ ಜಾಗದಲ್ಲಿ ಬಟ್ಟೆ, ಕಾರ್ಡ್‌ಬೋರ್ಡ್ ಅಥವಾ ಛತ್ರಿಗಳನ್ನು ಬಳಸಿ ನೆರಳಿನ, ತಂಪಾದ ಜಾಗವನ್ನು ಸೃಷ್ಟಿಸಿ, ಇದು ಪ್ರಾಣಿಗಳಿಗೆ ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ. ಮುಖ್ಯವಾಗಿ ನೆರಳಿರುವ ಜಾಗದಲ್ಲಿ ವಿಶ್ರಾಂತಿ ಪಡೆಯುವ ಬೀಡಾಡಿ ಪ್ರಾಣಿಗಳನ್ನು ಕಲ್ಲು ಹೊಡೆದು ಓಡಿಸುವ ತಪ್ಪನ್ನೂ ಮಾಡದಿರಿ.

ಪ್ರಾಣಿಗಳಿಗೆ ಆಹಾರ ನೀಡಿ: ಬೆಳಗಿನ ಜಾವ ಅಥವಾ ಸಂಜೆ ಸಮಯದಲ್ಲಿ ಬೀಡಾಡಿ ಪ್ರಾಣಿಗಳಿಗೆ ಆಹಾರವನ್ನು ನೀಡಿ. ಈ ಸಮಯದಲ್ಲಿ ಆಹಾರ ನೀಡುವುದರಿಂದ ಮಧ್ಯಾಹ್ನದ ತೀವ್ರ ಶಾಖವನ್ನು ತಪ್ಪಿಸಲು ಅವುಗಳಿಗೆ ಸಹಾಯವಾಗುತ್ತದೆ. ಮುಖ್ಯವಾಗಿ ನೆರಳಿನ ಪ್ರದೇಶದಲ್ಲಿ ಅವುಗಳಿಗೆ ಆಹಾರವನ್ನು ಇಟ್ಟುಬಿಡಿ.

ಪಕ್ಷಿಗಳಿಗೆ ನೀರು ಒದಗಿಸಿ: ಬೇಸಿಗೆಯ ಸಮಯದಲ್ಲಿ ಗುಬ್ಬಚ್ಚಿ ಮುಂತಾದ ಸಣ್ಣ ಪಕ್ಷಿಗಳಿಗೆ ಕುಡಿಯಲು ನೀರನ್ನು ಒದಸಿ, ಇದಕ್ಕಾಗಿ ಛಾವಣಿಯ ಮೇಲೆ ನೀರಿನಿಂದ ತುಂಬಿದ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಹಾಗೂ ಕಾಳುಗಳನ್ನು ಇಡಬಹುದು.

ಇದನ್ನೂ ಓದಿ: ಉರಿ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವಾಗ ಅಗತ್ಯವಾಗಿ ವಸ್ತುಗಳನ್ನು ನಿಮ್ಮೊಂದಿಗೆ ಒಯ್ಯಿರಿ

ದುರ್ಬಲ ಅಥವಾ ಗಾಯಗೊಂಡ ಪ್ರಾಣಿಗಳಿಗೆ ಸಹಾಯ ಮಾಡಿ: ಶಾಖದ ಅಲೆ ತೀವ್ರವಿರುವ ಸಮಯದಲ್ಲಿ ಯಾವುದಾದರೂ  ದುರ್ಬಲ ಅಥವಾ ಗಾಯಗೊಂಡ ಪ್ರಾಣಿಯನ್ನು ನೀವು ನೋಡಿದರೆ, ಅದಕ್ಕೆ ನೀರುಣಿಸಿ ಮತ್ತು ಕೈಲಾದ ಸಹಾಯವನ್ನು ಮಾಡಿ.

ನೀರುಣಿಸಲು ಮಣ್ಣಿನ ಪಾತ್ರೆಗಳನ್ನೇ ಬಳಸಿ: ಮಣ್ಣಿನ ಮಡಕೆಗಳು ನೀರನ್ನು ದೀರ್ಘಕಾಲ ತಂಪಾಗಿರಿಸುತ್ತವೆ, ಮಣ್ಣಿನ ಪಾತ್ರೆಗಳ ನೀರು ಸೇವನೆ ಮಾಡುವುದರಿಂದ ಪ್ರಾಣಿ ಪಕ್ಷಿಗಳ ದೇಹವೂ ತಂಪಾಗಿರುತ್ತವೆ.

ಇತರರನ್ನೂ ಪ್ರೋತ್ಸಾಹಿಸಿ: ನೆರೆಹೊರೆಯವರು ಮತ್ತು ಸ್ನೇಹಿತರಿಗೂ ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಒದಗಿಸುವಂತೆ ಪ್ರೋತ್ಸಾಹಿಸುವುದರಿಂದ  ಬೀಡಾಡಿ ಪ್ರಾಣಿಗಳಿಗೆ ಸುರಕ್ಷಿತ ತಾಣಗಳನ್ನು ಸೃಷ್ಟಿಸಲು ಸಹಾಯವಾಗುತ್ತದೆ. ಅಲ್ಲದೆ ನೀವು ನಿಮ್ಮ ಮನೆ ಸುತ್ತಲೂ ಮರಗಿಡಗಳನ್ನೂ ನೆಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *