ಈ ಸುಡು ಬೇಸಿಗೆಯಲ್ಲಿ (summer) ಮನೆಯಿಂದ ಹೊರಗಡೆ ಕಾಲಿಡಲು ಸಹ ಸಾಧ್ಯವಾಗುವುದಿಲ್ಲ. ಅದರಲ್ಲೂ ಸೂರ್ಯನ ಪ್ರಕರ ಶಾಖದ ನಡುವೆ ದ್ವಿಚಕ್ರ ವಾಹನ ಸವಾರಿ ಮಾಡುವುದು ಸವಾಲಿನ ಕೆಲಸವೇ ಸರಿ. ಹೌದು ತೀವ್ರವಾದ ಬಿಸಿಲು ಮತ್ತು ಬಿಸಿ ಗಾಳಿಯು ದೇಹವನ್ನು ಆಯಾಸಗೊಳಿಸುತ್ತದೆ. ದೇಹವು ಬೇಗನೆ ದಣಿದಿದೆ, ಗಮನವು ವಿಚಲಿತವಾಗುತ್ತದೆ ಮತ್ತು ಸಣ್ಣದೊಂದು ಅಜಾಗರೂಕತೆಯು ಸಹ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಈ ಶಾಖದ ಸಮಯದಲ್ಲಿ ಬೈಕ್, ಸ್ಕೂಟರ್ ಓಡಿಸುವಾಗ ನಿಮ್ಮ ಆರೋಗ್ಯದ ಜೊತೆಗೆ ಸುರಕ್ಷತೆಯನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಈ ವಾಹನ ಚಲಾಯಿಸುವಾಗ ಈ ಕೆಲವು ಪ್ರಮುಖ ವಿಚಾರಗಳನ್ನು ಗನಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ತೀವ್ರ ಬಿಸಿಲಿನಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಈ ವಿಚಾರಗಳನ್ನು ಗಮನದಲ್ಲಿಡಿ:
ತೀವ್ರ ಬಿಸಿಲಿನ ಶಾಖದಲ್ಲಿ ಬೈಕ್ ಸವಾರಿ ಮಾಡುವುದರಿಂದ ಆಯಾಸವಾಗುವುದಲ್ಲದೆ, ಆರೋಗ್ಯಕ್ಕೂ ಹಾನಿಯಾಗುತ್ತದೆ. ಸ್ವಲ್ಪ ಕಾಳಜಿ ವಹಿಸಿದರೆ, ಸುರಕ್ಷಿತವಾಗಿ ಚಾಲನೆ ಮಾಡಬಹುದು.
- ಮಧ್ಯಾಹ್ನ 12:00 ರಿಂದ ಸಂಜೆ 4:00 ರವರೆಗೆ ಬಿಸಿಲು ಜಾಸ್ತಿ ಇರುವಂತಹ ಸಂದರ್ಭದಲ್ಲಿ ದ್ವಿಚಕ್ರ ವಾಹನ ಓಡಿಸುವುದನ್ನು ತಪ್ಪಿಸಿ. ತೀರಾ ಅಗತ್ಯವಿದ್ದರೆ ಮಾತ್ರ ಆ ಸಮಯದಲ್ಲಿ ಪ್ರಯಾಣಿಸಿ.
- ಬಿಸಿ ಗಾಳಿಯಿಂದಾಗಿ ಶುಷ್ಕತೆ ಹೆಚ್ಚಾಗುತ್ತದೆ. ಬಿಸಿ ಗಾಳಿಯೊಂದಿಗೆ ಧೂಳು ಕೂಡ ಹಾರುತ್ತಿರುತ್ತವೆ. ಇದರಿಂದಾಗಿ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ಶಾಖದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಯಾವಾಗಲೂ ಹೆಲ್ಮೆಟ್ ಧರಿಸಿ. ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ, ಶಾಖದ ಹೊಡೆತದಿಂದ ಪಾರಾಗಬಹುದು. ಧೂಳಿನಿಂದ ಕಣ್ಣಿಗೆ ಹಾನಿಯಾಗದಂತೆ ನೋಡಿಕೊಳ್ಳಬಹುದು.
- ದೀರ್ಘ ಪ್ರಯಾಣಗಳಲ್ಲಿ ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ ಮತ್ತು ಆಗಾಗ್ಗೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಬಾಯಾರಿಕೆಯಾಗುವವರೆಗೂ ಕಾಯುವ ಬದಲು ಆಗಾಗ್ಗೆ ನೀರು ಕುಡಿಯಿರಿ. ಹೆಚ್ಚುವರಿಯಾಗಿ, ಶಕ್ತಿಯನ್ನು ಕಾಪಾಡಿಕೊಳ್ಳಲು ORS ಅಥವಾ ಎಳನೀರನ್ನು ಸಹ ಕುಡಿಯಬಹುದು.
- ಬಿಸಿಲಿನ ಶಾಖದಲ್ಲಿ ದ್ವಿಚಕ್ರ ವಾಹನ ಚಲಾಯಿಸುವಾಗ ತಲೆತಿರುಗುವಿಕೆ, ಅತಿಯಾದ ಬೆವರುವಿಕೆ, ತಲೆನೋವು ಅಥವಾ ಹಠಾತ್ ಆಯಾಸ ಕಂಡುಬಂದರೆ, ಅವುಗಳನ್ನು ನಿರ್ಲಕ್ಷಿಸಬೇಡಿ. ಇವು ಶಾಖದ ಹೊಡೆತದ ಆರಂಭಿಕ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ನಿಲ್ಲಿಸಿ ನೆರಳಿನ ಅಥವಾ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಿರಿ.
- ಬೇಸಿಗೆಯಲ್ಲಿ ಸರಿಯಾದ ಬಟ್ಟೆಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ದಪ್ಪ ಚರ್ಮ ಅಥವಾ ಭಾರವಾದ ಬಟ್ಟೆಯ ಜಾಕೆಟ್‌ಗಳ ಬದಲಿಗೆ, ಮೆಶ್ ರೈಡಿಂಗ್ ಜಾಕೆಟ್‌ಗಳನ್ನು ಧರಿಸಿ. ಇವು ಗಾಳಿಯನ್ನು ಪ್ರಸಾರ ಮಾಡಲು ಅನುಮತಿಸುವ ಸಣ್ಣ ರಂಧ್ರಗಳನ್ನು ಹೊಂದಿರುತ್ತವೆ ಮತ್ತು ಸುರಕ್ಷತಾ ರಕ್ಷಾಕವಚವನ್ನು ಸಹ ಹೊಂದಿವೆ.
- ಗಾಢ ಬಣ್ಣಗಳು ಸೂರ್ಯನ ಬೆಳಕನ್ನು ಆಕರ್ಷಿಸುತ್ತವೆ, ಆದ್ದರಿಂದ ಯಾವಾಗಲೂ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಯಾವಾಗಲೂ ಪೂರ್ಣ ತೋಳಿನ ಟಿ-ಶರ್ಟ್ ಧರಿಸಿ. ಹೆಚ್ಚು ಬಿಸಿಯಾಗದ ಮತ್ತು ಆರಾಮದಾಯಕವಾದ ಬೂಟುಗಳನ್ನು ಧರಿಸಿ.
- ಬಿಸಿಲಿನಲ್ಲಿ ದೀರ್ಘಕಾಲ ಬೈಕ್ ಓಡಿಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ವಿಶೇಷವಾಗಿ ಕೈಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ, ಬೈಕ್ ಸವಾರಿ ಮಾಡುವಾಗ, ಹತ್ತಿ ಅಥವಾ ತಿಳಿ ಬಟ್ಟೆಯ ಕೈಗವಸುಗಳನ್ನು ಧರಿಸಿ ಮತ್ತು ಕೈಗಳಿಗೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.
- ಪ್ರಕಾಶಮಾನವಾದ ಸೂರ್ಯನ ಬೆಳಕು ಮತ್ತು UV ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು, ಉತ್ತಮ ಗುಣಮಟ್ಟದ ಸನ್ಗ್ಲಾಸ್ ಧರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:02 pm, Sun, 3 May 26
