ಬಾಲಿವುಡ್ ನಟ ಸುಶಾಂತ್ ಸಿಂಗ್ (Sushant Singh) ನಿಧನವಾಗಿ ಆರು ವರ್ಷಗಳಾಗುತ್ತಾ ಬಂದಿದೆ. 2020ರ ಜೂನ್ ತಿಂಗಳಲ್ಲಿ ಸುಶಾಂತ್ ಅವರು ನಿಧನ ಹೊಂದಿದ್ದರು. ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಮುಂಬೈನ ಅವರ ಮನೆಯಲ್ಲಿ ಪತ್ತೆ ಆಗಿತ್ತು. ಸುಶಾಂತ್ ಸಿಂಗ್ ಸಾವು ಹಲವು ರೀತಿಯಲ್ಲಿ ಬಾಲಿವುಡ್ ಅನ್ನು ಕಾಡಿತ್ತು. ಅದರಲ್ಲೂ ಸುಶಾಂತ್ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಅಂತೂ ನಾನಾ ರೀತಿಯ ಸಂಕಟಗಳನ್ನು ಎದುರಿಸಬೇಕಾಯ್ತು. ಪ್ರಕರಣದಲ್ಲಿ ಅವರನ್ನು ವಿಲನ್ ಮಾಡಲಾಗಿತ್ತು. ಜೈಲಿಗೆ ಸಹ ಹೋಗಿ ಬಂದರು. ಆದರೆ ವಿಚಾರಣೆ ನಡೆದು ಸತ್ಯಗಳು ಒಂದೊಂದಾಗಿ ಹೊರಗೆ ಬರತೊಡಗಿದಾಗ ಅವರ ಮೇಲಿದ್ದ ಅನುಮಾನಗಳು ಕರಗತೊಡಗಿದವು. ಇದೀಗ ಸುಮಾರು ಆರು ವರ್ಷಗಳ ಬಳಿಕ ರಿಯಾಗೆ ತಮ್ಮ ಹಣದ ಮೇಲಿನ ಹಕ್ಕು ಮರಳಿ ದೊರೆತಿದೆ.
ಮುಂಬೈನ ವಿಶೇಷ ನ್ಯಾಯಾಲಯವು ನಟಿ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್ ಮತ್ತು ತಾಯಿ ಸಂಧ್ಯಾ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ‘ಡಿ-ಫ್ರೀಜ್’ ಮಾಡಲು ಅನುಮತಿ ನೀಡಿದೆ. 2020ರಲ್ಲಿ ನಟ ಸುಶಾಂತ್ ಸಿಂಗ್ ರಾಜ್ಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (NCB) ಸುಶಾಂತ್ ಮತ್ತು ಅವರ ಸಹೋದರನ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ಡ್ರಗ್ಸ್ ಜಾಲದೊಂದಿಗೆ ಲಿಂಕ್ ಇದೆ ಎಂಬ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿತ್ತು.
ಇದೀಗ ನಡೆದ ವಿಚಾರಣೆಯಲ್ಲಿ ತನಿಖಾ ಸಂಸ್ಥೆಯು ಎನ್ಡಿಪಿಎಸ್ (NDPS) ಕಾಯ್ದೆಯ ಸೆಕ್ಷನ್ 68F ಅಡಿಯಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದ್ದು, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ 30 ದಿನಗಳ ಒಳಗಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕಿತ್ತು, ಆದರೆ ಈ ಪ್ರಕರಣದಲ್ಲಿ ಹಾಗೆ ಮಾಡಿಲ್ಲ ಎಂದು ಕೋರ್ಟ್ ಹೇಳಿದೆ. ಕಾನೂನುಬದ್ಧವಾಗಿ ಪ್ರಕ್ರಿಯೆ ನಡೆಯದ ಕಾರಣ, ಇನ್ನು ಮುಂದೆ ಈ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ ಇಡುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ರಿಯಾ ಕುಟುಂಬಕ್ಕೆ ತಮ್ಮ ಹಣವನ್ನು ಬಳಸಲು ಈಗ ಅವಕಾಶ ಸಿಕ್ಕಿದೆ.
ಇದನ್ನೂ ಓದಿ:‘ವೈಲ್ಡ್ ಟೈಗರ್ ಸಫಾರಿ’ ಸಿನಿಮಾದಲ್ಲಿ ಕ್ರೂರ ವಿಲನ್ ಆದ ಸುಶಾಂತ್ ಪೂಜಾರಿ
ಸುಶಾಂತ್ ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಈಗಾಗಲೇ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರನಿಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐ ತನ್ನ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದು, ತನಿಖಾ ವರದಿಯಲ್ಲಿ ಸುಶಾಂತ್ ಸಾವಿನ ಹಿಂದಿ ರಿಯಾರ ಕೈವಾಡವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಆದರೆ ಸುಶಾಂತ್ ಸಿಂಗ್ ಕುಟುಂಬದವರು ವಿಶೇಷವಾಗಿ ಅವರ ಸಹೋದರಿ, ಈಗಲೂ ಸಹ ರಿಯಾ ಚಕ್ರವರ್ತಿ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.
ಸುಶಾಂತ್ ಸಿಂಗ್ ಪ್ರಕರಣದ ಬಳಿಕ ರಿಯಾ ಚಕ್ರವರ್ತಿಗೆ ಚಿತ್ರರಂಗದಲ್ಲಿ ಅವಕಾಶಗಳೇ ಇಲ್ಲದಂತಾಯ್ತು. ಇದೀಗ ರಿಯಾ ಮತ್ತು ಅವರ ಸಹೋದರ ಸೇರಿ ಬಟ್ಟೆ ಬ್ರ್ಯಾಂಡ್ ಒಂದನ್ನು ನಡೆಸುತ್ತಿದ್ದು, ಇತ್ತೀಚೆಗಷ್ಟೆ ಅವರ ಹೊಸ ಶಾಪ್ ಆರಂಭವಾಗಿದೆ. ರಿಯಾ ಚಕ್ರವರ್ತಿ, ಯೂಟ್ಯೂಬ್ನಲ್ಲಿ ಪಾಡ್ಕಾಸ್ಟ್ ಸಹ ನಡೆಸುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ