ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ರೇಕ್ಕಾಣದ ಮೂಲಕ ಭವಿಷ್ಯದ ಚಿಂತನೆಯನ್ನು ಮಾಡಲು ಸಾಧ್ಯ. ಫೆಬ್ರವರಿ13 ರಿಂದ ಫೆಬ್ರವರಿ 23ರವರೆಗೆ ಸೂರ್ಯನು ಕುಂಭ ರಾಶಿಯಲ್ಲಿದ್ದು ಶನಿಯ ದ್ರೇಕ್ಕಾಣದಲ್ಲಿ (ಅಂದರೆ ಕುಂಭ ರಾಶಿಯ ಮೊದಲ ೧೦ ಡಿಗ್ರಿ) ಇರುತ್ತಾನೆ. ಕುಂಭದ ಮೊದಲ ದ್ರೇಕ್ಕಾಣ ಶನಿಯದ್ದಾಗಿದೆ. ಈ ರಾಶಿಯಲ್ಲಿ ಶನಿಯ ಪ್ರಭಾವ ಅಧಿಕವಾಗಿ ಉಂಟಾಗುವ ಕಾರಣ ಶುಭಾಶುಭ ಫಲಗಳು ಹೀಗಿವೆ.
ಸೂರ್ಯ ಮತ್ತು ಶನಿ ಪರಸ್ಪರ ಶತ್ರು ಗ್ರಹಗಳು. ಸೂರ್ಯನು ಶನಿಯ ಮನೆಯಾದ ಕುಂಭದಲ್ಲಿ ಸಂಚರಿಸುವಾಗ ಮತ್ತು ಶನಿಯ ದ್ರೇಕ್ಕಾಣದಲ್ಲೇ ಇದ್ದಾಗ ಫಲಗಳು ಕೊಂಚ ಕಠಿಣವಾಗಿರುತ್ತವೆ.
ಶುಭ ಫಲಗಳು:
ಮಕರ ಮತ್ತು ಕುಂಭ ರಾಶಿ:
ನಿಮ್ಮ ರಾಶ್ಯಾಧಿಪತಿ ಶನಿಯೇ ಆಗಿರುವುದರಿಂದ, ಕೆಲಸದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಳೆಯ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.
ವೃಷಭ ರಾಶಿ:
ಹತ್ತನೇ ಮನೆಯಲ್ಲಿ ಈ ಸ್ಥಿತಿ ಇರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಸಿಗುತ್ತವೆ. ಅಧಿಕಾರದಲ್ಲಿರುವವರಿಂದ ಗೌರವ ದೊರೆಯುತ್ತದೆ.
ತುಲಾ ರಾಶಿ:
ಸಂಶೋಧನೆ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಈ ಕಾಲವು ಬಹಳ ಅನುಕೂಲಕರವಾಗಿದೆ. ಶ್ರಮಕ್ಕೆ ತಕ್ಕಂತೆ ಆರ್ಥಿಕ ಲಾಭವಾಗಲಿದೆ.
ಮಿಶ್ರ ಫಲಗಳು:
ಮೇಷ ರಾಶಿ:
ಏಕಾದಶ ರಾಶಿಯಲ್ಲಿ ಸೂರ್ಯ ಇರುವುದರಿಂದ ಆರ್ಥಿಕ ಲಾಭವಿರುತ್ತದೆ, ಆದರೆ ಸ್ನೇಹಿತರೊಂದಿಗೆ ಅಥವಾ ಹಿರಿಯ ಸಹೋದರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.
ಧನು ರಾಶಿ:
ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಬಹುದು, ಆದರೆ ಕೆಲಸದಲ್ಲಿ ವಿಳಂಬ ಉಂಟಾಗಬಹುದು.
ಅಶುಭ ಫಲಗಳು:
ಸಿಂಹ ರಾಶಿ:
ಸೂರ್ಯನು ನಿಮ್ಮ ರಾಶ್ಯಾಧಿಪತಿ. ಸಪ್ತಮ ಸ್ಥಾನದಲ್ಲಿ ಶತ್ರು ರಾಶಿಯಲ್ಲಿದ್ದು ಶನಿ ದ್ರೇಕ್ಕಾಣದಲ್ಲಿರುವುದು ದಾಂಪತ್ಯ ಜೀವನದಲ್ಲಿ ಉದ್ವಿಗ್ನತೆ ಅಥವಾ ಪಾಲುದಾರಿಕೆಯಲ್ಲಿ ನಷ್ಟ ತರಬಹುದು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.
ಕರ್ಕಾಟಕ ರಾಶಿ:
ಅಷ್ಟಮ ಸ್ಥಾನದಲ್ಲಿ ಸೂರ್ಯ ಮತ್ತು ಶನಿಯ ಪ್ರಭಾವ ಇರುವುದರಿಂದ ಅನಗತ್ಯ ಮಾನಸಿಕ ಒತ್ತಡ, ಅಪವಾದ ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.
ವೃಶ್ಚಿಕ ರಾಶಿ:
ಚತುರ್ಥದಲ್ಲಿ ಈ ಸ್ಥಿತಿ ಇರುವುದರಿಂದ ಮನೆಯ ಸುಖ-ಶಾಂತಿಗೆ ಭಂಗ ಬರಬಹುದು ಅಥವಾ ಆಸ್ತಿ ವಿಚಾರದಲ್ಲಿ ವಿವಾದಗಳು ತಲೆದೂರಬಹುದು.
ಸೂರ್ಯ-ಶನಿ ಸಂಬಂಧವು ತಂದೆ-ಮಗನ ನಡುವಿನ ಭಿನ್ನಾಭಿಪ್ರಾಯ ಅಥವಾ ಮೇಲಧಿಕಾರಿಗಳೊಂದಿಗೆ ಸಂಘರ್ಷವನ್ನು ಸೂಚಿಸುತ್ತದೆ.
ಈ ಸಮಯದಲ್ಲಿ ಪ್ರತಿದಿನ ಶಿವ ಪಂಚಾಕ್ಷರಿ ಮಂತ್ರ ಜಪಿಸುವುದು ಅಥವಾ ಸೂರ್ಯನಿಗೆ ನಮಸ್ಕಾರ ಅಶುಭ ಫಲಗಳನ್ನು ಕಡಿಮೆ ಮಾಡಲು ಸಹಕಾರಿ.
– ಲೋಹಿತ ಹೆಬ್ಬಾರ್