ಸೆನ್ಸಾರ್ ನಿಯಮ ಉಲ್ಲಂಘನೆ: ‘ಮಾಲಿವುಡ್ ಟೈಮ್ಸ್’ ಚಿತ್ರತಂಡದ ವಿರುದ್ಧ ಎಫ್‌ಐಆರ್ ದಾಖಲು – Kannada News | FIR against Mollywood Times movie makers after CBFC Censor Violations Unapproved Content Screening

ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದ ದೃಶ್ಯಗಳನ್ನು ಚಿತ್ರಮಂದಿರಗಳಲ್ಲಿ ಅಕ್ರಮವಾಗಿ ಪ್ರದರ್ಶಿಸಿದ ಆರೋಪದ ಮೇಲೆ ‘ಮಾಲಿವುಡ್ ಟೈಮ್ಸ್’ (Mollywood Times) ಮಲಯಾಳಂ ಸಿನಿಮಾದ ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರ ವಿರುದ್ಧ ಕೇರಳ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಾದೇಶಿಕ ಕಚೇರಿ ನೀಡಿದ ಅಧಿಕೃತ ದೂರು ಆಧರಿಸಿ ತಿರುವಲ್ಲಂ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ನಂತರ, ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾದ ಆವೃತ್ತಿಯಲ್ಲಿ ಮಾರ್ಪಾಡು ಮಾಡಿ, ಅನುಮೋದನೆ ಇಲ್ಲದ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ಮಂಡಳಿ ಆರೋಪಿಸಿದೆ.

ನಸ್ಲೆನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಾಲಿವುಡ್ ಟೈಮ್ಸ್’ ಚಿತ್ರಕ್ಕೆ ಕೆಲವು ನಿರ್ದಿಷ್ಟ ದೃಶ್ಯಗಳನ್ನು ಕತ್ತರಿಸಲು ಮತ್ತು ಆಕ್ಷೇಪಾರ್ಹ ಸಂಭಾಷಣೆಗಳನ್ನು ಮ್ಯೂಟ್ ಮಾಡಲು ಸೂಚಿಸಿದ ಬಳಿಕವಷ್ಟೇ ಈ ಚಿತ್ರಕ್ಕೆ ‘ಯು/ಎ 16+’ ರೇಟಿಂಗ್ ನೀಡಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಪ್ರಸಾರ ಆಗುತ್ತಿರುವ ಪ್ರಿಂಟ್‌ಗಳಲ್ಲಿ ಸೆನ್ಸಾರ್ ಮಂಡಳಿಯ ಆದೇಶವನ್ನು ಗಾಳಿಗೆ ತೂರಲಾಗಿದೆ.

ಕತ್ತರಿಸಲಾಗಿದ್ದ ದೃಶ್ಯಗಳನ್ನು ಮತ್ತು ಮ್ಯೂಟ್ ಮಾಡಲಾಗಿದ್ದ ಅಶ್ಲೀಲ ಪದಗಳನ್ನು ಮರುಸೇರ್ಪಡೆ ಮಾಡಿ ಪ್ರದರ್ಶಿಸಲಾಗುತ್ತಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಿಗೆ ಬೇರೆಯದೇ ಆದ ಅನ್-ಸೆನ್ಸಾರ್ಡ್ ಆವೃತ್ತಿಯನ್ನು ವಿತರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 7(1)(a)(ii) ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.

ಭಾರತದಲ್ಲಿ ಸೆನ್ಸಾರ್ ನಿಯಮಗಳನ್ನು ಉಲ್ಲಂಘಿಸುವುದು ಗಂಭೀರ ಅಪರಾಧವಾಗಿದೆ. ಈ ಕಾಯ್ದೆಯಡಿ, ಸೆನ್ಸಾರ್ ಆಗದ ಚಿತ್ರವನ್ನು ಪ್ರದರ್ಶಿಸುವುದು ಅಥವಾ ಪ್ರಮಾಣೀಕರಣದ ನಂತರ ಚಿತ್ರದಲ್ಲಿ ಕಾನೂನುಬಾಹಿರವಾಗಿ ಬದಲಾವಣೆ ಮಾಡಿದರೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ, ನಿಯಮ ಉಲ್ಲಂಘಿಸಿದ ಚಿತ್ರದ ಪ್ರಿಂಟ್‌ಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನ್ಯಾಯಾಲಯಕ್ಕಿದೆ.

ಇದನ್ನೂ ಓದಿ: ‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೀಘ್ರದಲ್ಲೇ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯಲಿದ್ದಾರೆ. ಎಫ್‌ಐಆರ್‌ನಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಅಭಿನವ್ ಸುಂದರ್ ನಾಯಕ್, ವಿತರಕರು, ಡಿಜಿಟಲ್ ಸರ್ವೀಸ್ ಪ್ರವೈಡರ್ ಮತ್ತು ಚಿತ್ರಮಂದಿರಗಳ ಮಾಲೀಕರ ಹೆಸರನ್ನು ಸೇರಿಸಲಾಗಿದೆ. ‘ಮಾಲಿವುಡ್ ಟೈಮ್ಸ್’ ಸಿನಿಮಾದಲ್ಲಿ ಚಿತ್ರರಂಗದ ಒಳಗಿನ ಕರಾಳ ಮುಖವನ್ನು ಅನಾವರಣಗೊಳಿಸುವ ಕಥೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *