Headlines

‘ಸೆರಗು ಸರಿದಿದ್ದಕ್ಕೆ’ ನೋರಾ ಕ್ಷಮೆ: ಜೊತೆಗೊಂದು ಮಹತ್ವದ ನಿರ್ಧಾರ – Kannada News | Nora Fatehi apologises to National Commission for Women over KD Movie song controversy

ಕೆಡಿ’ (KD) ಸಿನಿಮಾದ ‘ಸರ್ಸೆ ಸೆರಗು’ ಹಾಡು ಉತ್ತರ ಭಾರತದಲ್ಲಿ ಭಾರಿ ವಿವಾದ ಹುಟ್ಟು ಹಾಕಿತ್ತು. ‘ಸರ್ಕೆ ಚುನರಿ’ ಹೆಸರಿನಲ್ಲಿ ಹಿಂದಿಯಲ್ಲಿ ಬಿಡುಗಡೆ ಆಗಿದ್ದ ಈ ಹಾಡಿನ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನಲ್ಲಿ ಕುಣಿದಿದ್ದ ನಟಿ ನೋರಾ ಫತೇಹಿ, ನಿರ್ದೇಶಕ ಪ್ರೇಮ್ ಇನ್ನಿತರೆ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿತ್ತು. ಪ್ರೇಮ್ ಸೇರಿದಂತೆ ಇನ್ನಿತರರು ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದ್ದರು. ಆದರೆ ನೋರಾ, ವಿಚಾರಣೆಯನ್ನು ಮುಂದೂಡುತ್ತಾ ಬಂದಿದ್ದರು. ಆದರೆ ಇಂದು ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾದ ನಟಿ ನೋರಾ ಫತೇಹಿ, ಲಿಖಿತ ಕ್ಷಮೆ ಕೇಳಿದ್ದಲ್ಲದೆ, ಒಂದು ಮಹತ್ವದ ನಿರ್ಧಾರವನ್ನು ಸಹ ಪ್ರಕಟಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೋರಾ, ತಾವು ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದರು. ‘ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ಅನಿವಾರ್ಯವಾಗಿ ಅಂತಹ ಸಂದರ್ಭ ಎದುರಾಗಿತ್ತು. ಆದರೆ ಒಬ್ಬ ಕಲಾವಿದೆಯಾಗಿ ನಾನು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ನಾನು ನಂಬುತ್ತೇನೆ, ಹಾಗಾಗಿ ಈಗ ಆಯೋಗದ ಮುಂದೆ ಕ್ಷಮೆ ಕೇಳಿದ್ದೇನೆ, ಎಲ್ಲವೂ ಲಿಖಿತ ರೂಪದಲ್ಲಿ ನಡೆಯಿತು, ಆಯೋಗದ ಸದಸ್ಯರು ಸಹ ಆತ್ಮೀಯವಾಗಿ ಸಹಕರಿಸಿದರು’ ಎಂದು ಅವರು ಹೇಳಿದರು.

ಅಲ್ಲದೆ, ವಿವಾದಕ್ಕೆ ಪ್ರಾಯಶ್ಚಿತ್ತವಾಗಿ ನೋರಾ ಫತೇಹಿ ಒಂದು ಪ್ರಮುಖ ನಿರ್ಧಾರವನ್ನು ಪ್ರಕಟಿಸಿದರು, ತಾವು ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು. ಸಮಾಜಕ್ಕೆ ಏನನ್ನಾದರೂ ಮರಳಿ ನೀಡುವುದು ಮುಖ್ಯ ಎಂಬ ಉದ್ದೇಶದಿಂದ ಈ ಹೆಜ್ಜೆ ಇಟ್ಟಿರುವುದಾಗಿ ಅವರು ತಿಳಿಸಿದರು. ಇದೇ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಕೂಡ ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದರು. ಸಂಜಯ್ ದತ್ ಅವರು 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ಭರವಸೆ ನೀಡಿದ್ದರು.

‘ಸರ್ಕೆ ಚುನರಿ’ ಹಾಡಿನ ಹಿಂದಿ ಆವೃತ್ತಿಯು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದಾಗ ಭಾರಿ ಟೀಕೆಗಳನ್ನು ಎದುರಿಸಿತ್ತು. ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಆಕ್ಷೇಪಾರ್ಹವಾಗಿವೆ ಎಂದು ಅನೇಕರು ದೂರಿದ್ದರು. ನಂತರ ಈ ಹಾಡನ್ನು ಯೂಟ್ಯೂಬ್​​ನಿಂದ ತೆಗೆದು ಹಾಕಲಾಯ್ತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕೂಡ ಈ ಹಾಡನ್ನು ನಿಷೇಧಿಸಲಾಗಿದೆ ಎಂದು ಸಂಸತ್ತಿನಲ್ಲಿ ತಿಳಿಸಿದ್ದರು. ಇದೀಗ ‘ಕೆಡಿ’ ಸಿನಿಮಾ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿ ಆ ವಿವಾದಾತ್ಮಕ ಹಾಡನ್ನು ತೆಗೆದು ಹಾಕಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *