T20 World Cup 2026: ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ಆಲ್ರೌಂಡರ್, ಸ್ಯಾಮ್ ಕರನ್ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುತ್ತೇವೆ ಎಂದು ಸವಾಲು ಹಾಕಿದ್ದರು. ಈ ಸವಾಲಿನ ಮುಕ್ತಾಯದಲ್ಲಿ ಸೈಲೆಂಟ್ ಆಗಿದ್ದ ಸ್ಯಾಮ್ ಕರನ್. ಅದು ಸಹ ಸೈಲೆಂಟ್ ಆಗಿ ತನ್ನದೇ ತಂಡವನ್ನು ಸೋಲಿಸುವ ಮೂಲಕ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಬರೋಬ್ಬರಿ 253 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು ಟಾಮ್ ಬ್ಯಾಂಟನ್, ವಿಲ್ ಜ್ಯಾಕ್ಸ್ ಕೂಡ ಅಲ್ಪ ಮೊತ್ತದ ಕಾಣಿಕೆ ನೀಡಿದ್ದರು.
ಈ ಮೂಲಕ ಇಂಗ್ಲೆಂಡ್ ತಂಡವು 14 ಓವರ್ಗಳ ಮುಕ್ತಾಯದ ವೇಳೆ ಬರೋಬ್ಬರಿ 172 ರನ್ ಕಲೆಹಾಕಿದ್ದರು. ಆದರೆ ಈ ರನ್ ಗತಿ ಕುಂಠಿತವಾಗಿದ್ದೇ ಸ್ಯಾಮ್ ಕರನ್ ಎಂಟ್ರಿಯೊಂದಿಗೆ. ನಿರ್ಣಾಯಕವಾಗಿದ್ದ ಕೊನೆಯ 6 ಓವರ್ಗಳ ವೇಳೆ ಬ್ಯಾಟಿಂಗ್ಗೆ ಆಗಮಿಸಿದ ಸ್ಯಾಮ್ ಕರನ್ 14 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 18 ರನ್ಗಳು ಮಾತ್ರ.
ಅಂದರೆ ನಿರ್ಣಾಯಕ ಹಂತದಲ್ಲಿ ಸ್ಯಾಮ್ ಕರನ್ ಕೇವಲ 128ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಅಂದರೆ ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿಯ ಓವರ್ಗಳಲ್ಲಿ ಹೆಚ್ಚಿನ ಬಾಲ್ ಎದುರಿಸಿದ್ದ ಕರನ್ ಸಿಂಗಲ್ ಹಾಗೂ ಡಬಲ್ ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ನಿಧಾನಗತಿಯ ಬ್ಯಾಟಿಂಗ್ ಇಂಗ್ಲೆಂಡ್ನ ಚೇಸಿಂಗ್ ಮೇಲೆ ಪರಿಣಾಮ ಬೀರಿತು ಎಂದರೆ ತಪ್ಪಾಗಲಾರದು.
ಇದಕ್ಕೂ ಮುನ್ನ ಬೌಲಿಂಗ್ನಲ್ಲಿ 4 ಓವರ್ಗಳಲ್ಲಿ ಬರೋಬ್ಬರಿ 53 ರನ್ ಚಚ್ಚಿಸಿಕೊಂಡಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಅಂದರೆ ಬೌಲಿಂಗ್ನಲ್ಲಿ 13.20ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟ ಸ್ಯಾಮ್ ಕರನ್ ಬ್ಯಾಟಿಂಗ್ನಲ್ಲಿ ಕಲೆಹಾಕಿದ್ದು ಕೇವಲ 18 ರನ್ಗಳು ಮಾತ್ರ.
ಇದನ್ನೂ ಓದಿ: ಯಾರಿಂದಲೂ ಸಹ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಜೇಕಬ್ ಬೆಥೆಲ್
ಸ್ಯಾಮ್ ಕರನ್ನ ಈ ಕಳಪೆ ಪ್ರದರ್ಶನವು ಇಂಗ್ಲೆಂಡ್ ತಂಡದ ಸೋಲಿಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ. ಅಂದರೆ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡಲು ಬಂದು, ಸ್ಯಾಮ್ ಕರನ್ ಸೈಲೆಂಟ್ ಆಗಿಯೇ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದ್ದರು ಎಂಬುದಕ್ಕೆ ಈ ಪ್ರದರ್ಶನದ ಅಂಕಿ ಅಂಶಗಳೇ ಸಾಕ್ಷಿ.
