ಎಲ್ಲಾ ಋತುವಿನಲ್ಲೂ ಸೊಳ್ಳೆಗಳ (mosquitoes) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಮಳೆಗಾಲದ ತೇವಯುಕ್ತ ವಾತಾವರಣದಲ್ಲಿ ಸೊಳ್ಳೆಗಳ ಹಾವಳಿ ತುಸು ಹೆಚ್ಚೇ ಇರುತ್ತವೆ. ಇವುಗಳು ಕಚ್ಚುವುದರಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಉಂಟಾಗುತ್ತವೆ. ಆದ್ದರಿಂದ ಸೊಳ್ಳೆಗಳು ಕಚ್ಚದಂತೆ ಜನ ಅನೇಕ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಿದ್ದರೂ ಹುಡುಕಿ ಹುಡುಕಿ ಬಂದು ಸೊಳ್ಳೆಗಳು ಕೆಲವು ಜನರನ್ನು ಕಚ್ಚುತ್ತವೆ. ನನ್ನ ರಕ್ತ ಸಿಹಿಯಾಗಿರಬೇಕು ಅದಕ್ಕೆ ಬಹುಶಃ ಸೊಳ್ಳೆಗಳು ಬಂದು ಬಂದು ನನಗೆ ಕಚ್ಚುತ್ತವೆ ಎಂದು ಜನ ತಮಾಷೆ ಮಾಡುತ್ತಾರೆ. ಆದರೆ ಹೀಗೆ ಸೊಳ್ಳೆಗಳು ಕೆಲವು ಜನರನ್ನು ಮಾತ್ರ ಹೆಚ್ಚು ಕಚ್ಚುವುದರ ಹಿಂದೆ ಒಂದಷ್ಟು ವೈಜ್ಞಾನಿಕ ಕಾರಣಗಳಿವೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.
ಸೊಳ್ಳೆಗಳು ಕೆಲ ಜನರಿಗೆ ಏಕೆ ಹೆಚ್ಚು ಕಚ್ಚುತ್ತವೆ?
ಸೊಳ್ಳೆಗಳು ತಮ್ಮ ಆಹಾರವನ್ನು ಆಯ್ಕೆ ಮಾಡಲು ಹಲವಾರು ಸೂಚನೆಗಳನ್ನು ಬಳಸುತ್ತವೆ ಎಂದು ವೈದ್ಯಕೀಯ ಅಧ್ಯಯನಗಳು ತೋರಿಸುತ್ತವೆ. ದೇಹದ ವಾಸನೆ, ಚರ್ಮದ ಮೇಲಿನ ಬ್ಯಾಕ್ಟೀರಿಯಾ, ದೇಹದ ಉಷ್ಣತೆ ಮತ್ತು ಕೆಲವು ರಕ್ತದ ಪ್ರಕಾರಗಳು ಸಹ ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತವೆ.
ದೇಹದ ವಾಸನೆ: ಸೊಳ್ಳೆಗಳು ಬೆವರಿನಲ್ಲಿರುವ ಕೆಲವು ಸಂಯುಕ್ತಗಳಿಗೆ ಆಕರ್ಷಿತವಾಗುತ್ತವೆ, ಇದು ಸೊಳ್ಳೆಗಳನ್ನು ಆಕರ್ಷಿಸುವ ಪರಿಮಳವನ್ನು ಸೃಷ್ಟಿಸುತ್ತದೆ. ಈ ಸಂಯುಕ್ತಗಳಲ್ಲಿ ಲ್ಯಾಕ್ಟಿಕ್ ಆಮ್ಲ ಮತ್ತು ಅಮೋನಿಯಾ ಸೇರಿವೆ. ಇದಲ್ಲದೆ ಲಕ್ಷಾಂತರ ಬ್ಯಾಕ್ಟೀರಿಯಾಗಳು ನಮ್ಮ ಚರ್ಮದ ಮೇಲೆ ವಾಸಿಸುತ್ತವೆ. ಈ ಬ್ಯಾಕ್ಟೀರಿಯಾಗಳು ಬೆವರಿನಲ್ಲಿರುವ ಅಂಶಗಳನ್ನು ಒಡೆಯುತ್ತವೆ ಮತ್ತು ವಿಭಿನ್ನ ವಾಸನೆಯನ್ನು ಉಂಟುಮಾಡುತ್ತವೆ. ಕೆಲವು ಜನರ ಚರ್ಮದಿಂದ ಬಿಡುಗಡೆಯಾಗುವ ಕಾರ್ಬಾಕ್ಸಿಲಿಕ್ ಆಮ್ಲಗಳು ಎಂಬ ರಾಸಾಯನಿಕಗಳಿಗೂ ಸೊಳ್ಳೆಗಳಿಗೆ ಹೆಚ್ಚು ಆಕರ್ಷಕವಾಗುತ್ತವೆ. ಈ ರಾಸಾಯನಿಕಗಳು ಹೆಚ್ಚು ಯಾರ ದೇಹದಲ್ಲಿ ಉತ್ಪಾದನೆಯಾಗುತ್ತದೆಯೋ ಆ ಜನರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ.
ರಕ್ತದ ಪ್ರಕಾರ: ಜಪಾನ್‌ನಲ್ಲಿ ನಡೆಸಿದ ಅಧ್ಯಯನವೊಂದು “O” ರಕ್ತದ ಗುಂಪಿನ ಜನರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂಬುದನ್ನು ಕಂಡು ಹಿಡಿದಿದೆ. ಚರ್ಮದಿಂದ ಹೊರಸೂಸುವ ರಾಸಾಯನಿಕ ಸಂಕೇತಗಳ ಆಧಾರದ ಮೇಲೆ ಸೊಳ್ಳೆಗಳು ರಕ್ತದ ಪ್ರಕಾರಗಳನ್ನು ಪತ್ತೆ ಮಾಡುತ್ತವೆ ಮತ್ತು O ರಕ್ತದ ಪ್ರಕಾರ ಹೊಂದಿರುವ ಜನರನ್ನು ಇತರರಿಗಿಂತ ಹೊಂದಿರುವವರಿಗಿಂತ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ.
ಗಾಢ ಬಣ್ಣದ ಬಟ್ಟೆಗಳು: ನೀವು ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಸೊಳ್ಳೆಗಳು ನಿಮ್ಮತ್ತ ಹೆಚ್ಚು ಆಕರ್ಷಿತವಾಗುತ್ತದೆ. ಸೊಳ್ಳೆಗಳು ಗಾಢ ಬಣ್ಣದ ಬಟ್ಟೆಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ. ನೀವು ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ನಿಮಗೆ ಸೊಳ್ಳೆಗಳು ಕಚ್ಚುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಮಳೆಗಾಲದಲ್ಲಿ ಹಾವುಗಳು ಮನೆ ಸುತ್ತ ಬರದಂತೆ ತಡೆಯಲು ಈ ಸುರಕ್ಷಾತ ಕ್ರಮಗಳನ್ನು ಅನುಸರಿಸಲೇಬೇಕು
ಸೊಳ್ಳೆಗಳಿಗೆ ಇಂಗಾಲದ ಡೈಆಕ್ಸೈಡ್ ಇಷ್ಟ: ನಾವು ಉಸಿರಾಟದ ಮೂಲಕ ಹೊರ ಹಾಕುವ ಇಂಗಾಲದ ಡೈ ಆಕ್ಸೈಡ್ ಕೂಡ ಸೊಳ್ಳೆಗಳಿಗೆ ಬಲು ಇಷ್ಟ. ಸೊಳ್ಳೆಗಳು ಇಂಗಾಲದ ಡೈ ಆಕ್ಸೈಡ್ ಅನ್ನು ದೂರದಿಂದಲೇ ಗ್ರಹಿಸಬಲ್ಲವು. ಗರ್ಭಿಣಿಯರು ಮತ್ತು ಹೆಚ್ಚು ವ್ಯಾಯಾಮ ಮಾಡುವ ಜನರು ತುಲನಾತ್ಮಕವಾಗಿ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತಾರೆ. ಇಂತಹ ಜನರ ಬಳಿ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ.
ದೇಹದ ಉಷ್ಣತೆ ಮತ್ತು ಬೆವರು: ದೇಹದ ಉಷ್ಣತೆ ಹೆಚ್ಚಿದ್ದರೂ ಸೊಳ್ಳೆಗಳು ನಿಮ್ಮನ್ನು ಕಚ್ಚುತ್ತವೆ. ಹೌದು ದೇಹದ ಉಷ್ಣತೆ ಹೆಚ್ಚಿದ್ದರೆ ಅಥವಾ ನೀವು ಜಾಸ್ತಿ ಬೆವರಿದರೆ ನಿಮ್ಮತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ.
ಮದ್ಯ ಸೇವಿಸುವ ಜನ: ಸಂಶೋಧನೆಯ ಪ್ರಕಾರ, ಬಿಯರ್ ಕುಡಿಯುವ ಜನರು ಸಹ ಇತರರಿಗಿಂತ ಹೆಚ್ಚಾಗಿ ಸೊಳ್ಳೆಗಳಿಂದ ಕಚ್ಚಲ್ಪಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
