
ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ್ ತಂಡ 1-2 ಅಂತರದಿಂದ ಸೋತಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕ್ ತಂಡವು ಮ್ಯಾಚ್ ರೆಫರಿ ನೀಯಮೂರ್ ರಶೀದ್ ಅವರಿಗೆ ಅಧಿಕೃತ ದೂರು ನೀಡಿದ್ದಾರೆ. ಈ ದೂರಿನಲ್ಲಿ ಬಾಂಗ್ಲಾದೇಶ್ ತಂಡವು ರಿವ್ಯೂ ತೆಗೆದುಕೊಳ್ಳಲು ಈ ಮಿತಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಆರೋಪಿಸಲಾಗಿದೆ.
ಮಾರ್ಚ್ 15, 2026 ರಂದು ಢಾಕಾದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದ ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 2 ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲರ್ ರಿಶಾದ್ ಹೊಸೈನ್ ಎಸೆದ 5ನೇ ಎಸೆತವನ್ನು ಅಂಪೈರ್ ಕುಮಾರ್ ಧರ್ಮಸೇನ ‘ವೈಡ್’ ಎಂದು ಘೋಷಿಸಿದ್ದರು.
ಇತ್ತ ಅಂಪೈರ್ ವೈಡ್ ಎಂದು ಘೋಷಿಸಿದರೂ ಬಾಂಗ್ಲಾದೇಶ್ ತಂಡವು ಎಲ್‌ಬಿಡಬ್ಲ್ಯೂ (LBW) ಗಾಗಿ ರಿವ್ಯೂ (DRS) ತೆಗೆದುಕೊಂಡಿತು. ಈ ವೇಳೆ ಚೆಂಡು ಪ್ಯಾಡ್ಗೆ ತಗುಲಿರುವುದು ಕಂಡು ಬಂದಿದೆ. ಇದಾಗ್ಯೂ ಶಾಹೀನ್ ಶಾ ಅಫ್ರಿದಿ ಎಲ್‌ಬಿಡಬ್ಲ್ಯೂ ಆಗಿರಲಿಲ್ಲ. ಹೀಗಾಗಿ ವೈಡ್ ಅನ್ನು ಹಿಂಪಡೆದು ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.
ಆದರೆ ಇದೀಗ ಈ ರಿವ್ಯೂ ತೆಗೆದುಕೊಳ್ಳಲು ಬಾಂಗ್ಲಾದೇಶ್ ತಂಡದ ನಾಯಕ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ ಎಂದು ಪಾಕಿಸ್ತಾನ್ ಆರೋಪಿಸಿದೆ.
ಐಸಿಸಿ ನಿಯಮದ ಪ್ರಕಾರ ರಿವ್ಯೂ ಕೇಳಲು ಕೇವಲ 15 ಸೆಕೆಂಡುಗಳ ಕಾಲಾವಕಾಶವಿರುತ್ತದೆ. ಆದರೆ ಬಾಂಗ್ಲಾದೇಶ್ ಈ ಮಿತಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.
ಕ್ರೀಡಾಂಗಣದ ಬಿಗ್ ಸ್ಕ್ರೀನ್ ಮೇಲೆ ರಿಪ್ಲೇ ನೋಡಿದ ನಂತರವೇ ಬಾಂಗ್ಲಾದೇಶ್ ತಂಡದ ನಾಯಕ ಮೆಹದಿ ಹಸನ್ ಮಿರಾಝ್ ರಿವ್ಯೂ ನಿರ್ಧಾರ ಮಾಡಿದ್ದಾರೆ. ಇದು ನಿಯಮಬಾಹಿರ ಎಂದು ಪಾಕಿಸ್ತಾನ ಆರೋಪಿಸಿದೆ.
ಅಲ್ಲದೆ ಈ ಬಗ್ಗೆ ಮ್ಯಾಚ್ ರೆಫರಿ ನೀಯಮೂರ್ ರಶೀದ್ ಅವರಿಗೆ ಅಧಿಕೃತ ದೂರು ನೀಡಿ ಬಾಂಗ್ಲಾದೇಶ್ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ್ ತಂಡ ಆಗ್ರಹಿಸಿದೆ.
ಇದನ್ನೂ ಓದಿ: IPL 2026: 10 ತಂಡಗಳು ರೆಡಿ: ಯಾರು ಬಲಿಷ್ಠ?
ಇನ್ನು ಈ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ 12 ಗುರಿ ಪಡೆದಿದ್ದ ಪಾಕಿಸ್ತಾನ್ ತಂಡಕ್ಕೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ್ ತಂಡವು 11 ರನ್‌ಗಳ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.