ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿನ ಸರಮಾಲೆ ಮುಂದುವರೆದಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್ಜಿ ಪಡೆ ಸೂಪರ್ ಓವರ್ನಲ್ಲಿ ಸೋಲೊಪ್ಪಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಎಲ್ಎಸ್ಜಿ 20 ಓವರ್ಗಳಲ್ಲಿ 155 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿ ಕೊಂಡಿದ್ದರು. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೇವಲ 1 ರನ್ಗಳಿಸಿದರೆ, ಈ ಗುರಿಯನ್ನು ಮೊದಲ ಎಸೆತದಲ್ಲೇ ಬೆನ್ನತ್ತಿ ಕೆಕೆಆರ್ ತಂಡ ಜಯ ಸಾಧಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ನಾವು ಸತತವಾಗಿ ಸೋಲುತ್ತಿದ್ದೇವೆ. ಹೀಗಾಗಿ ನಮಗೆ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ. ಈ ಸೋಲುಗಳಿಗೆ ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳು ಕಾರಣರಲ್ಲ. ಇದರ ಹೊಣೆಗಾರಿಕೆಯನ್ನು ಇಡೀ ತಂಡ ಹೊರಬೇಕು.
ಸತತ ಸೋಲುಗಳಿಂದ ಉಂಟಾದ ಮಾನಸಿಕ ಒತ್ತಡವನ್ನು ಹೋಗಲಾಡಿಸಲು ತಂಡಕ್ಕೆ ಒಂದು “ವಿರಾಮ” ಬೇಕು. ವಿಶ್ರಾಂತಿ ಪಡೆದ ಬಳಿಕ ಸೋಲಿಗೆ ಕಾರಣಗಳೇನು ಎಂಬುದನ್ನು ವಿಮರ್ಶಿಸಬೇಕಿದೆ ಎಂದಿದ್ದಾರೆ.
ಇದೇ ವೇಳೆ ಫಾರ್ಮ್‌ನಲ್ಲಿಲ್ಲದ ನಿಕೋಲಸ್ ಪೂರನ್ ಅವರನ್ನು ಸೂಪರ್ ಓವರ್‌ಗೆ ಕಳುಹಿಸಿದ ನಿರ್ಧಾರದ ಬಗ್ಗೆ ಮಾತನಾಡಿದ ಪಂತ್, ಕಷ್ಟದ ಸಮಯದಲ್ಲಿ ಆಟಗಾರನನ್ನು ಬೆಂಬಲಿಸುವುದು ಮುಖ್ಯ. ಅಂಕಿ ಅಂಶಗಳಿಗಿಂತ ಆಟಗಾರನ ಸಾಮರ್ಥ್ಯದ ಮೇಲೆ ನಂಬಿಕೆ ಇಡುವ ಮುಖ್ಯವಾಗುತ್ತದೆ. ಹೀಗಾಗಿ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಕೊನೆಯ ಓವರ್ ಅನ್ನು ದಿಗ್ವೇಶ್ ರಾಠಿಗೆ ನೀಡಿದ ಬಗ್ಗೆ ಮಾತನಾಡಿದ ರಿಷಭ್ ಪಂತ್, ತುಂಬಾ ಯೋಚಿಸುವುದು ಮೈದಾನದಲ್ಲಿನ ಕೆಲಸಗಳನ್ನು ಸುಲಭಗೊಳಿಸುವುದಿಲ್ಲ. ಮೈದಾನದ ಒಳಗೆ ಹೊರಗಿನ ಸಲಹೆಗಳಿಗಿಂತ ತನ್ನ ಆಲೋಚನೆಗಳು ಕೂಡ ಮುಖ್ಯವಾಗುತ್ತದೆ. ಹೀಗಾಗಿ ಅಂತಿಮ ಓವರ್ನಲ್ಲಿ ಯಶಸ್ಸು ಸಾಧಿಸಬಹುದು ಎಂದು ದಿಗ್ವೇಶ್ಗೆ ಚೆಂಡು ನೀಡಿರುವುದಾಗಿ ತಿಳಿಸಿದ್ದಾರೆ.
ರಿಷಭ್ ಪಂತ್ ಅವರ ಪ್ರಸ್ತುತ ಹಾದಿಯು ಭಾವನಾತ್ಮಕವಾಗಿ ಮತ್ತು ನಾಯಕತ್ವದ ದೃಷ್ಟಿಯಿಂದ ಪ್ರಬಲವಾಗಿ ಕಂಡರೂ, ಐಪಿಎಲ್‌ನಂತಹ ವೇಗದ ಟೂರ್ನಿಯಲ್ಲಿ ಫಲಿತಾಂಶಗಳು ಶೀಘ್ರವಾಗಿ ಬಾರದಿದ್ದರೆ ಟೀಕೆಗಳು ಹೆಚ್ಚಾಗುವುದು ಸಹಜ. ಮುಂಬರುವ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಈ ‘ವಿರಾಮ’ವನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದು ಪಂತ್ ಅವರ ಈ ತತ್ವಗಳ ಯಶಸ್ಸನ್ನು ನಿರ್ಧರಿಸಲಿದೆ.
ಇದನ್ನೂ ಓದಿ: ಚೆಂಡು ವಿಕೆಟ್ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ
ಅಲ್ಲದೆ ಈಗಾಗಲೇ 8 ಪಂದ್ಯಗಳಲ್ಲಿ 6 ಮ್ಯಾಚ್ ಸೋತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಂದಿನ ಆರು ಪಂದ್ಯಗಳೂ ಕೂಡ ನಿರ್ಣಾಯಕ. ಈ ಮ್ಯಾಚ್ಗಳಲ್ಲಿ ಕೆಲ ಪಂದ್ಯಗಳಲ್ಲಿ ಸೋತರೂ ಟೂರ್ನಿಯಿಂದ ಹೊರಬೀಳುವುದು ಖಚಿತ ಎಂದೇ ಹೇಳಬಹುದು.
