IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಎಲ್ಎಸ್ಜಿ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ನಾಯಕ ರಿಷಭ್ ಪಂತ್ ಅವರೊಂದಿಗೆ ಚರ್ಚಿಸುತ್ತಿರುವುದು ಕಂಡು ಬಂದಿದೆ.
ಲಕ್ನೋನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ 18.4 ಓವರ್ಗಳಲ್ಲಿ 141 ರನ್ಗಳಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17.1 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಜಯ ಸಾಧಿಸಿದೆ.
ಇತ್ತ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಕಳಪೆ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ಸೋಲೊಪ್ಪಿಕೊಂಡಿರುವುದಕ್ಕೆ ಎಲ್ಎಸ್ಜಿ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
ಪಂದ್ಯದ ನಂತರ ಸಂಜೀವ್ ಗೋಯೆಂಕಾ ಅವರು ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಗಂಭೀರವಾಗಿ ಮಾತನಾಡುತ್ತಿರುವುದು ಕಂಡುಬಂದಿದ್ದು, ಈ ವೇಳೆ ಗೋಯೆಂಕಾ ಅವರು ಕೈಸನ್ನೆ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಪಂತ್ ಶಾಂತವಾಗಿ ಅವರಿಗೆ ಉತ್ತರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂದಹಾಗೆ ಸಂಜೀವ್ ಗೋಯೆಂಕಾ ಹೀಗೆ ತಂಡದ ನಾಯಕನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2024ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀನಾಯವಾಗಿ ಸೋತಾಗ ಮೈದಾನದಲ್ಲೇ ಅಂದಿನ ನಾಯಕ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ದೊಡ್ಡ ವಿವಾದವಾಗಿತ್ತು. ಇದೀಗ ಸೋಲಿನ ಬೆನ್ನಲ್ಲೇ ರಿಷಭ್ ಪಂತ್ಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಗೋಯೆಂಕಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
