ಬೆಂಗಳೂರು, ಫೆಬ್ರವರಿ 23: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಕೇಸ್ನಲ್ಲಿ ತೀವ್ರ ಹೋರಾಟ ನಡೆಸಿದ್ದ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನು 2 ದಿನ ಹಿಂದಷ್ಟೇ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದ್ದರು. ಮುಡಾ ಮಾಜಿ ಆಯುಕ್ತ ನಟೇಶ್ ಅವರ ಆಡಿಯೋ ಬಹಿರಂಗ ವಿಚಾರವಾಗಿ ಈ ಕ್ರಮ ಆಗಿತ್ತು. ಇದೀಗ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಪವಿತ್ರಾ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಹೊಸ ಎಫ್‌ಐಆರ್ ದಾಖಲಿಸಲಾಗಿದೆ.
ಪವಿತ್ರಾ ಅವರ ಪತಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ಮರುತನಿಖೆಗೆ ಆಗ್ರಹಿಸಿದ್ದ ಸ್ನೇಹಮಯಿ ಕೃಷ್ಣ, ಮೈಲಾರಪ್ಪ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆಯುವಂತೆ ಪವಿತ್ರಾ ಅವರಿಗೆ ತಾಕೀತು ಮಾಡಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಸ್ನೇಹಮಯಿ ಕೃಷ್ಣ ಅವರು 2025ರ ಡಿಸೆಂಬರ್ 5ರಂದು ಪವಿತ್ರಾ ಅವರ ಮನೆ ವಿಳಾಸಕ್ಕೆ ಪತ್ರವೊಂದನ್ನು ಬರೆದಿದ್ದರು. ಈ ಪತ್ರದ ಮೂಲಕ ಒತ್ತಡ ಹೇರಿದ್ದರಿಂದ ತಮ್ಮ ನೆಮ್ಮದಿ ಹಾಳಾಗಿದೆ ಎಂದು ಪವಿತ್ರಾ ದೂರು ನೀಡಿದ್ದಾರೆ.
ಈ ಹಿಂದೆ ಬಸವೇಶ್ವರ ನಗರ ಪೊಲೀಸರು ಈ ಸಂಬಂಧ ಎನ್‌ಸಿಆರ್ ದಾಖಲಿಸಿದ್ದರು. ಇದೀಗ ನ್ಯಾಯಾಲಯದ ಅನುಮತಿಯ ಮೇರೆಗೆ ಸ್ನೇಹಮಯಿ ಕೃಷ್ಣ ಮತ್ತು ಮೈಲಾರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪವಿತ್ರಾ ನೀಡಿದ ದೂರಿನ ಎರಡು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
