
ಬೆಂಗಳೂರು, ಮಾರ್ಚ್ 31: ಇತ್ತೀಚೆಗೆ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಭಾನುವಾರ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಮೊಬೈಲ್ ಫೋನ್ಗಳನ್ನು ಡ್ರೈನೇಜ್ ಮಾರ್ಗದಲ್ಲಿ ಬಚ್ಚಿಟ್ಟಿದ್ದೂ ತಿಳಿದು ಬಂದಿತ್ತು. ಕಟ್ಟುನಿಟ್ಟಿನ ನಿಯಮಗಳಿದ್ದರೂ ಈ ರೀತಿಯ ಅಕ್ರಮ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಈ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿರುವುದೂ ತಿಳಿದುಬಂದಿದೆ.
ಹತ್ತು ದಿನಗಳಲ್ಲಿ 21 ಮೊಬೈಲ್ ಪತ್ತೆ, ಡಿಜಿಪಿ ಅಸಮಾಧಾನ
ಕಳೆದ ಹತ್ತು ದಿನಗಳಲ್ಲಿ ಜೈಲು ಅಧಿಕಾರಿಗಳು 21 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ, ಬಹುತೇಕ ಫೋನ್ಗಳನ್ನು ಹಾಲಿನ ಕವರ್ಗಳಲ್ಲಿ ಮೊಬೈಲ್ಗಳನ್ನು ಪ್ಯಾಕ್ ಮಾಡಿ ಕೊಳಚೆ ನೀರು ಹರಿಯುವ ಪೈಪ್ಗಳಲ್ಲಿ ಮರೆಮಾಚಿ ಇಟ್ಟಿರುವುದು ಪತ್ತೆಯಾಗಿದೆ. ಜೈಲಿನೊಳಗೆ ಜಾಮರ್ ವ್ಯವಸ್ಥೆ ಇದ್ದರೂ ನೆಟ್ವರ್ಕ್ ಸಿಗುತ್ತಿರುವುದರ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಜೈಲರ್ಗಳು ಹಾಗೂ ವಾರ್ಡರ್ಗಳ ಶಾಮೀಲು ಇರುವ ಶಂಕೆ ವ್ಯಕ್ತವಾಗಿದ್ದು, ಎಲ್ಲರ ಮೇಲೂ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಎಸ್ಪಿ ಅಂಶುಕುಮಾರ್ ನೇತೃತ್ವದಲ್ಲಿ ಕೆಲ ಅನುಮಾನಿತ ವಾರ್ಡರ್ಗಳನ್ನು ವಿಚಾರಣೆಗೊಳಪಡಿಸಲಾಗಿದೆ.
ಇದನ್ನೂ ಓದಿ ‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಜೈಲಲ್ಲೇ ಕೂತು ವಿಡಿಯೋ ಮಾಡಿದ ಕೈದಿಗಳು!
ಬೆದರಿಕೆ ಹಾಕಿದವರ ವಿರುದ್ಧ ಕೇಸ್
ಮೊಬೈಲ್ ವಶಕ್ಕೆ ಪಡೆಯಲು ಮುಂದಾದ ಜೈಲು ಸಿಬ್ಬಂದಿಗೆ ಕೆಲವು ಕೈದಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಕೂಡ ನಡೆದಿದೆ. ರಿಜ್ವಾನ್ ಅಲಿ ಮತ್ತು ಮೊಹಮ್ಮದ್ ಸಾಧಿಕ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಮನೆಗೆ ಹೋಗುವುದಿಲ್ಲ, ಸ್ಮಶಾನಕ್ಕೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ ಆರೋಪ ಇದೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.