ಬೆಂಗಳೂರು, (ಆಗಸ್ಟ್ 14): ಕಲಬುರಗಿ ಬೆನ್ನಲ್ಲೇ ಬೆಂಗಳೂರಿನಲ್ಲೂ (Bengaluru) ಇಂದು (ಆಗಸ್ಟ್ 14) ಓರ್ವ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಆಸ್ಫುಲಾ ಮಲ್ಲಿಕ್(25) ಎನ್ನುವಾತನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆಸ್ಫುಲಾ ಮಲ್ಲಿಕ್ ಜಿಗಣಿಯಲ್ಲಿ ವಾಸ ಇದ್ದ. ಇನ್ನು ಈತ TTP(ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ) ಸಂಘಟನೆಯ ಶಂಕಿತ ಉಗ್ರ ಎನ್ನಲಾಗಿದ್ದು, ಉಗ್ರ ಸಂಘಟನೆ ಜೊತೆ ದಾಳಿಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಪಾಕಿಸ್ತಾನ, ಭಾರತ ಸೇರಿದಂತೆ ಕೆಲ ದೇಶಗಳೇ ಈತನ ಟಾರ್ಗೆಟ್ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಸಿಕ್ಕಿಬಿದ್ದಿದ್ಹೇಗೆ?
ಸೋಷಿಯಲ್ ಮಿಡಿಯಾ ಮಾನಿಟರಿಂಗ್ ಮಾಡುವಾಗ ಪತ್ತೆಯಾಗಿರುವ ಶಂಕಿತ ಉಗ್ರನ ಜಾಡು ಸಿಕ್ಕಿದ್ದು, ಹೆಬ್ಬಗೋಡಿ ಇನ್ಸ್ ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ಒಂದು ತಿಂಗಳಿನಿಂದ ಫಾಲೋಅಪ್ ಮಾಡಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ವಿಚಾರ ಬೆಳಕಿಗೆ ಬಂದಿವೆ.
ಇದನ್ನೂ ಓದಿ: ಕಲಬುರಗಿಯಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದ ಮಹಮ್ಮದ್ ಸಮೀರ್ ಬಂಧನ: ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು
ಮುಸ್ಲಿಂರ ಮೇಲೆ ದೌರ್ಜನ್ಯ ಎಸಗುವ ಕಡೆಗಳಲ್ಲಿ ದಾಳಿಗೆ ಸಂಚು
ಬೆಂಗಳೂರಿನಲ್ಲೇ ಇದ್ದುಕೊಂಡು ಪಾಕಿಸ್ತಾನಿ ಸೇನೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ. ಪಾಕಿಸ್ತಾನದಲ್ಲಿ ಮಸೀದಿಗಳ ಮೇಲೆ ಮತ್ತು ಅಲ್ಲಿನ ಜನರ ಮೇಲೆ ಪಾಕಿಸ್ತಾನ ಸೇನೆಯಿಂದ ನಡೆಯುವ ದೌರ್ಜನ್ಯ, ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವಿನ ವಿವಾದದಲ್ಲಿ, ಇಸ್ರೇಲ್ ಪರವಾಗಿ ಪಾಕಿಸ್ತಾನ ಸೇನೆ ಸಹಾಯ ಮಾಡುತ್ತಿದೆ. ಪ್ಯಾಲಿಸ್ಪೇನ್ ಮುಸಲ್ಮಾರಿಗೆ ಸಹಾಯ ಮಾಡುತ್ತಿಲ್ಲವೆಂಬ ವಿಚಾರದ ಬಗ್ಗೆ ಪೋಸ್ಟ್ ಮಾಡಿದ್ದ. TTP ಸಂಘಟನೆಯ ಸದಸ್ಯ ಅಫಾಘನಿಸ್ತಾನ ದೇಶದ ಇಮ್ರಾನ್ ಅಹಿಂದರ್ ಎಂಬಾತನ ಪರಿಚಯ ಮಾಡಿಕೊಂಡಿದ್ದ ಅಸಾಪೂಲ್ ಮಲ್ಲಿಕ್, ಸಂಘಟನೆಯೊಂದಿಗೆ ಸೇರಿ ಪಾಕಿಸ್ತಾನ ಸೇನೆ ಮೇಲೆ ಮತ್ತು ಇಲ್ಲಿಯೂ ಪ್ರತಿಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ.
ಪಾಕ್ ಸೇನೆ ಮೇಲೆ ಪ್ರತಿಕಾರ ತಿರಿಸಿಕೊಳ್ಳುವ ಆಡಿಯೋ ಪತ್ತೆ
ಅಷ್ಟೇ ಅಲ್ಲದೇ ಇಮ್ರಾನ್ ಅಹಿಂದರ್ ಎಂಬುವನ ಸಹಾಯ ಪಡೆದುಕೊಂಡು ಆಪಘಾನಿಸ್ತಾನಕ್ಕೆ ಹೋಗಲು ಪಾಸ್‌ಪೋರ್ಟ್ ಮಾಡಿಸಿಕೊಂಡು ವೀಸಾಗೆ ಅರ್ಜಿ ಸಲ್ಲಿದ್ದ. ಆದ್ರೆ, ಕಾರಣಾಂತರಗಳಿಂದ ಅಪಘಾನಿಸ್ತಾನಕ್ಕೆ ಹೋಗಿರುವುದಿಲ್ಲ. ಪಾಕಿಸ್ತಾನ ಸೇನೆ ಮೇಲೆ ಪ್ರತಿಕಾರ ತಿರಿಸಿಕೊಳ್ಳುವ ಬಗ್ಗೆ ಆತನ ಮೊಬೈಲ್ ನಲ್ಲಿ ಮೆಸೇಜ್ ಆಡಿಯೋಗಳು ಸಿಕ್ಕಿವೆ. ಸಂಘಟನೆಯ ವಿಚಾರಧಾರೆಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಹಾಕುತ್ತಿದ್ದ. ಅಪಘಾನಿಸ್ತಾನಕ್ಕೆ ಹೋಗಿದ್ರೆ ಟ್ರೈನಿಂಗ್ ಆಗಿ ಮತ್ತೆ ಭಾರತಕ್ಕೆ ಬರುತ್ತಿದ್ದ. ಇಲ್ಲಿಗೆ ಬಂದು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇತ್ತು.
ಈತ ಎರಡನೇ ಬಾರಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದ. ಶಂಕಿತ ಉಗ್ರನ ಜೊತೆಗೆ ರೂಮಿನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದ. ಆತನೂ ಕೂಡ ವೆಸ್ಟ್ ಬೆಂಗಾಲ್ ಮೂಲದವನಾಗಿದ್ದು, ಸದ್ಯ ಎಸ್ಕೇಪ್ ಆಗಿದ್ದಾನೆ. ಕೆಲ ಸಂಘಟನೆಗಳಿಗೆ ಶಂಕಿತ ಉಗ್ರ ಅಸಾಪೂಲ್ ಮಲ್ಲಿಕ್ ಹಣವನ್ನ ಕೂಡ ಹಾಕಿದ್ದ.
ಸದ್ಯ ಪೊಲೀಸರು ಶಂಕಿತ ಉಗ್ರನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಇನ್ನೂ ಯಾವೆಲ್ಲಾ ಅಂಶಗಳು ಬಯಲಿಗೆ ಬರುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:36 pm, Fri, 14 August 26
