ಹಣಕೊಡಲಿಲ್ಲವೆಂದು ತಾವೇ ಸರಿಪಡಿಸಿದ್ದ ಬಾಲಕಿಯ ಮೂಳೆಯನ್ನು ಮತ್ತೆ ಮುರಿದು ಕಳುಹಿಸಿದ ವೈದ್ಯರು – Kannada News

ಮುಜಫರ್‌ನಗರ, ಜೂನ್ 04: ಹಣ ಕೊಡಲಿಲ್ಲವೆಂದು ವೈದ್ಯ(Doctor)ರು ತಾವೇ ಸರಿಪಡಿಸಿದ್ದ ಬಾಲಕಿಯ ಮೂಳೆಯನ್ನು ಮತ್ತೆ ಮುರಿದು ಕಳುಹಿಸಿರುವ ಘಟನೆ ಮುಜಫರ್​ನಗರದಲ್ಲಿ ನಡೆದಿದೆ. ಬಾಲಕಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಂಪೂರ್ಣ ಉಚಿತ ಮರುಚಿಕಿತ್ಸೆ ನೀಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಗಂಡನಿಲ್ಲದ ಮಹಿಳೆ,  ಮಾನಸಿಕವಾಗಿ ಅಸ್ವಸ್ಥ ಮಗಳನ್ನು ಕರೆದುಕೊಂಡು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು, ತಾನು ಕೂಲಿ ಮಾಡಿ ಜೀವನ ಸಾಗಿಸಬೇಕು ಮಗಳ ಕಾಲು ಮೂಳೆ ಮುರಿದಿದೆ.

ದಯವಿಟ್ಟು ಸರಿ ಮಾಡಿಕೊಡಿ ಎಂದು ಅಂಗಲಾಚಿ ಕೇಳಿದ್ದಾರೆ. ಅದಕ್ಕೆ ವೈದ್ಯರು 25 ಸಾವಿರ ರೂ. ಕೊಡುವಂತೆ ಕೇಳಿದ್ದಾರೆ. ಆದರೆ ತನ್ನ ಬಳಿ ಹಣವಿಲ್ಲ ಎಂದಿದ್ದಕ್ಕೆ ಹಾಗಾದ್ರೆ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಅವರ ಮೂಲಕ ಆಸ್ಪತ್ರೆಗೆ ಹೋದಾಗ 8 ಸಾವಿರ ರೂ. ಮುಂಗಡ ಕೊಡುವಂತೆ ಕೇಳಿದ್ದಾರೆ.

ಆಗ 8 ಸಾವಿರ ರೂ. ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಬಳಿಕ ಚೆಕ್​ಅಪ್​ಗೆಂದು ಬಂದ ವೈದ್ಯರು ಪೂರ್ತಿ ಹಣಕೊಡುವಂತೆ ಕೇಳಿದ್ದಾರೆ. ಆಗ ತನ್ನ ಬಳಿ ಹಣವಿಲ್ಲ ಎಂದಾಗ ಮತ್ತೆ ಆ ಬಾಲಕಿಯ ಮೂಳೆಯನ್ನು ಮುರಿದಿದ್ದಾರೆ ಎಂಬುದು ಮಹಿಳೆಯ ಆರೋಪವಾಗಿದೆ.

ಮತ್ತಷ್ಟು ಓದಿ: ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪೀಕಿದ ವೈದ್ಯ?: ಸ್ಕ್ಯಾನಿಂಗ್​​ ವರದಿ ಕಂಡು ರೋಗಿಗೆ ಶಾಕ್​​!

ಮಾನಸಿಕ ಅಸ್ವಸ್ಥಳಾಗಿದ್ದ ಮಗಳನ್ನು ಹೊತ್ತುಕೊಂಡು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದ ತಾಯಿ ರೇಷ್ಮಾ ಅವರ ಅಳಲನ್ನು ಅಧಿಕಾರಿಗಳು ಮತ್ತು ಮಾಧ್ಯಮಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ.

ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ, ಬಾಲಕಿಯನ್ನು ತಕ್ಷಣವೇ ಪರಿಣಿತ ವೈದ್ಯರ ನಿಗಾಕ್ಕೆ ಒಳಪಡಿಸಲಾಗಿದೆ. ಆಕೆಯ ಕಾಲಿನ ಮೂಳೆಯನ್ನು ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಮೂಲಕ ಉಚಿತವಾಗಿ ಸರಿಪಡಿಸಲು ಮತ್ತು ಗುಣಮುಖವಾಗುವವರೆಗೆ ಆಸ್ಪತ್ರೆಯಲ್ಲೇ ಉನ್ನತ ದರ್ಜೆಯ ಆರೈಕೆ ನೀಡಲು ಆಡಳಿತ ಮಂಡಳಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ.

ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರು ಈ ಮುಂಚೆ ನಡೆಸಿದ್ದಾರೆನ್ನಲಾದ ಹಣದ ಸುಲಿಗೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣದ ಕುರಿತು ಮಾತನಾಡಿದ ಮುಜಫರ್‌ನಗರದ ಮುಖ್ಯ ವೈದ್ಯಾಧಿಕಾರಿ (CMO) ಸುನಿಲ್ ತೆವಾಟಿಯಾ ಅವರು, ಇದೊಂದು ಅತ್ಯಂತ ಗಂಭೀರ ಮತ್ತು ಸೂಕ್ಷ್ಮ ವಿಷಯವಾಗಿದ್ದು, ವ್ಯವಸ್ಥೆಯಲ್ಲಿ ಇಂತಹ ಬೇಜವಾಬ್ದಾರಿತನವನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲಕಿಯ ಎಕ್ಸ್-ರೇ ವರದಿ ಹಾಗೂ ತಾಯಿಯ ದೂರನ್ನು ಆಧರಿಸಿ ತನಿಖೆಗೆ ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ. ಡಾ. ಚತುರ್ವೇದಿ ಹಾಗೂ ಅಲ್ಲಿನ ಸಿಬ್ಬಂದಿಗಳ ವರ್ತನೆ ಮತ್ತು ಲಂಚದ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ಯಾವುದೇ ಹಂತದಲ್ಲಿ ವೈದ್ಯರ ನಿರ್ಲಕ್ಷ್ಯ ಅಥವಾ ಕಾನೂನುಬಾಹಿರ ಸುಲಿಗೆ ದೃಢಪಟ್ಟರೆ, ತಪ್ಪಿತಸ್ಥರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ, ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು, ಎಂದು ಸಿಎಂಒ ಭರವಸೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ತಾಯಿ ರೇಷ್ಮಾ ಅವರು ಅನುಭವಿಸಿದ ನೋವಿಗೆ ಸದ್ಯ ಆಡಳಿತದ ತ್ವರಿತ ಹಸ್ತಕ್ಷೇಪದಿಂದಾಗಿ ಪರಿಹಾರ ಸಿಕ್ಕಂತಾಗಿದೆ. ಬಾಲಕಿಗೆ ಉನ್ನತ ಚಿಕಿತ್ಸೆ ಆರಂಭವಾಗಿರುವುದು ಮತ್ತು ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನು ಸಮರಕ್ಕೆ ಆಡಳಿತ ಮುಂದಾಗಿರುವುದು ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಪುನಃಸ್ಥಾಪಿಸಲು ನೆರವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *