
ದಾವಣಗೆರೆ, ಮಾ.14: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಹನಿಟ್ರ್ಯಾಪ್ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಖಾಸಗಿ ಆಸ್ಪತ್ರೆ ನರ್ಸ್ ಎಂದು ಹೇಳಿಕೊಂಡು ಕಷ್ಟ ಅಂತ ಹೇಳಿಕೊಂಡು ಉದ್ಯಮಿ ಹನಿಟ್ರ್ಯಾಪ್ ಮಾಡಲು ಹೋಗಿದ್ದ ಮಹಿಳೆ ಮತ್ತು ಆಕೆಯ ಜತೆಗೆ ಇದ್ದ ವ್ಯಕ್ತಿಗಳು ಇದೀಗ ತಮ್ಮ ತಪ್ಪಿನ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂದು ಹೇಳಿದ್ದಾರೆ. ಆರೋಪ ಹೊತ್ತಿರುವ ಬಿಳಿಚೋಡು ಚನ್ನಬಸಪ್ಪ ಮತ್ತು ಸಂಬಂಧಪಟ್ಟ ಮಹಿಳೆ ಇಂದು ಸುದ್ದಿಗೋಷ್ಠಿ ನಡೆಸಿ, “ನಾವು ಹನಿಟ್ರ್ಯಾಪ್ ಮಾಡಿಲ್ಲ, ಬದಲಾಗಿ ನಮ್ಮನ್ನು ಪ್ರಭಾವಿಗಳು ಸಂಚು ರೂಪಿಸಿ ಸಿಲುಕಿಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಮಹಿಳೆ, “ಓರ್ವ ಪ್ರಭಾವಿ ವ್ಯಕ್ತಿಯಿಂದ ನಮಗೆ ತೊಂದರೆಯಾಗಿತ್ತು.
ಈ ಬಗ್ಗೆ ನ್ಯಾಯ ಪಡೆಯಲು ನಾವು ವಕೀಲರ ಮನೆಗೆ ಹೋಗಿದ್ದೆವು. ಆದರೆ ಆ ವ್ಯಕ್ತಿ ತನ್ನ ಕೃತ್ಯ ಎಲ್ಲಿ ಬಹಿರಂಗವಾಗುತ್ತದೆಯೋ ಎಂಬ ಭಯದಿಂದ, ತಾನೇ ನನ್ನ ಮಾನಭಂಗ ಮಾಡಿ ಈಗ ಪೊಲೀಸರ ಮೂಲಕ ನಮ್ಮನ್ನು ಬಂಧಿಸುವಂತೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. “ನಮ್ಮ ಮೇಲಿನ ಹಳೆಯ ದ್ವೇಷ ತೀರಿಸಿಕೊಳ್ಳಲು ಪೊಲೀಸ್ ಅಧಿಕಾರಿಯೊಬ್ಬರು ಈ ಕೃತ್ಯಕ್ಕೆ ಸಾಥ್ ನೀಡಿದ್ದಾರೆ. ಹನಿಟ್ರ್ಯಾಪ್ ಎಂಬ ಹಣೆಪಟ್ಟಿ ಕಟ್ಟಿ ನಮ್ಮ ಜೀವನದ ಜೊತೆ ಆಟವಾಡಲಾಗುತ್ತಿದೆ” ಎಂದು ಬಿಳಿಚೋಡು ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ಬಡ ಹೆಣ್ಣು ಮಕ್ಕಳ ಮತ್ತು ಸಾಮಾನ್ಯ ಜನರ ಜೀವನದ ಜೊತೆ ಆಟವಾಡುವ ಪ್ರಭಾವಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಆರೋಪಿತರು ಪೂರ್ವ ವಲಯ ಐಜಿಪಿ (IGP) ಅವರಿಗೆ ಸಮಗ್ರ ತನಿಖೆ ಕೋರಿ ಮನವಿ ಸಲ್ಲಿಸಿದ್ದಾರೆ.ಈ ಹಿಂದೆ ಇದೇ ಪ್ರಕರಣದಲ್ಲಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ದೂರು ದಾಖಲಾಗಿತ್ತು. ಆದರೆ ಈಗ ಆರೋಪಿಗಳೇ ತಿರುಗಿಬಿದ್ದು ತಮಗಾದ ಅನ್ಯಾಯದ ಬಗ್ಗೆ ದ್ವನಿ ಎತ್ತಿರುವುದು ಪ್ರಕರಣವನ್ನು ಮತ್ತಷ್ಟು ನಿಗೂಢಗೊಳಿಸಿದೆ.
ಇದನ್ನೂ ಓದಿ: ಕಷ್ಟ ಅಂತ ಹೇಳಿಕೊಂಡು ದಾವಣೆಗೆರೆ ಉದ್ಯಮಿಗೆ ಹನಿಟ್ರ್ಯಾಪ್: ನರ್ಸ್ ಸೇರಿ ನಾಲ್ವರು ಅರೆಸ್ಟ್
ಹನಿಟ್ರ್ಯಾಪ್ ನಡೆಸಿದ ಯಾರನ್ನು? ಹೇಗೆ?
ನಗರದ ಪ್ರತಿಷ್ಠಿತ ಉದ್ಯಮಿಯೊಬ್ಬರನ್ನು ಬಲೆಗೆ ಬೀಳಿಸಿ, ಅವರಿಂದ ಹಣ ವಸೂಲಿ ಮಾಡಲು ಯತ್ನಿಸಿದ ಹನಿಟ್ರ್ಯಾಪ್ ಜಾಲವನ್ನು ದಾವಣಗೆರೆ ಪೊಲೀಸರು ಪತ್ತೆಹಚ್ಚಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರು ಮಹಿಳಾ ನರ್ಸ್ ಹಾಗೂ ಚನ್ನಬಸಪ್ಪ ಸೇರಿದಂತೆ ಮೂವರು ಪುರುಷರನ್ನು ಬಂಧಿಸಲಾಗಿತ್ತು. ಆರೋಪಿತ ಮಹಿಳೆಯು ತಾನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಉದ್ಯಮಿಯ ಬಳಿ ಸಹಾಯ ಕೇಳಿದ್ದಳು. ಪರಿಚಯ ಬೆಳೆಸಿಕೊಂಡು ನಂಬಿಕೆ ಗಳಿಸಿದ ಬಳಿಕ, ಉದ್ಯಮಿಯನ್ನು ಏಕಾಂತಕ್ಕೆ ಕರೆಸಿಕೊಳ್ಳಲಾಗಿತ್ತು. ಉದ್ಯಮಿ ಮಹಿಳೆಯೊಂದಿಗೆ ಇದ್ದ ಸಂದರ್ಭವನ್ನು ಆರೋಪಿಗಳ ತಂಡ ರಹಸ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿತ್ತು ಎನ್ನಲಾಗಿದೆ. ವಿಡಿಯೋ ಸಿದ್ಧವಾಗುತ್ತಿದ್ದಂತೆ ತನ್ನ ಅಸಲಿ ರೂಪ ತೋರಿಸಿದ ತಂಡ, “ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ ಮತ್ತು ಕುಟುಂಬದವರಿಗೆ ತಿಳಿಸುತ್ತೇವೆ” ಎಂದು ಬೆದರಿಸಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಉದ್ಯಮಿ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಲೆ ಬೀಸಿ ನರ್ಸ್ ಸೇರಿದಂತೆ ನಾಲ್ವರನ್ನು ಅರೆಸ್ಟ್ ಮಾಡಿದ್ದರು. ಇದೀಗ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಇದರಲ್ಲಿ ಪ್ರಭಾವಿ ವ್ಯಕ್ತಿಯ ಕೈವಾಡ ಇದೆ ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ