ಹನಿಮೂನ್ ಮರ್ಡರ್ 2.0: ಮದುವೆಯಾದ 3 ತಿಂಗಳಲ್ಲೇ ಗಂಡನನ್ನು ಕೊಂದು ಅಪಘಾತವೆಂದು ನಂಬಿಸಿದ ಹೆಂಡತಿ – Kannada News | Honeymoon murder 2.0: Newlywed wife killed husband with lover masks it as accident in Rajasthan

ನವದೆಹಲಿ, ಫೆಬ್ರವರಿ 5: ಆಶಿಶ್ ಮತ್ತು ಅಂಜಲಿ ಇಬ್ಬರೂ ಮದುವೆಯಾಗಿ ಕೇವಲ 3 ತಿಂಗಳಾಗಿತ್ತು. ಬಹಳ ಅನ್ಯೋನ್ಯವಾಗಿಯೇ ಇದ್ದ ಅವರ ನಡುವೆ ಯಾವ ಜಗಳವೂ ಆಗಿರಲಿಲ್ಲ. ಅದೊಂದು ದಿನ ಅವರಿಬ್ಬರೂ ರಾತ್ರಿ ವಾಕಿಂಗ್ ಹೋಗಿದ್ದರು. ಆಗ ವೇಗವಾಗಿ ಬಂದ ವಾಹನವೊಂದು ಆಶಿಶ್​​ಗೆ ಡಿಕ್ಕಿ ಹೊಡೆದಿತ್ತು. ಇದರಿಂದ ದೂರಕ್ಕೆ ಹಾರಿ ಬಿದ್ದ ಆಶಿಶ್ ಅಂಜಲಿಯ ಕಣ್ಣೆದುರೇ ಪ್ರಾಣ ಬಿಟ್ಟಿದ್ದ. ಆಕೆ ಸಹಾಯಕ್ಕಾಗಿ ಕಿರುಚಾಡುತ್ತಿದ್ದಾಗ ವಾಹನದಿಂದ ಇಳಿದ ಕೆಲವು ಮಂದಿ ಅಂಜಲಿಯ ಮೈಮೇಲಿದ್ದ ಒಡವೆಯನ್ನು ದೋಚಿಕೊಂಡು, ಆಕೆಯನ್ನು ತಳ್ಳಿ ಪರಾರಿಯಾಗಿದ್ದರು. ಇದು ಅಂಜಲಿ ಪೊಲೀಸರ ಬಳಿ ಹೇಳಿದ್ದ. ಕತೆ. ಮೊದಲು ಪೊಲೀಸರು ಇದೊಂದು ಅಪಘಾತ (Accident) ಎಂದೇ ಭಾವಿಸಿದ್ದರು.

ಆದರೆ, ಅದ್ಯಾಕೋ ಪೊಲೀಸರಿಗೆ ಅಂಜಲಿಯ ಮೇಲೆ ಸಣ್ಣದೊಂದು ಅನುಮಾನ ಮೂಡಿತ್ತು. ಇದಕ್ಕೆ ಕೆಲವೇ ತಿಂಗಳ ಹಿಂದೆ ನಡೆದಿದ್ದ ಮೇಘಾಲಯದ ಹನಿಮೂನ್ ಮರ್ಡರ್ ಕೂಡ ಒಂದು ಕಾರಣ. ಹೆಂಡತಿ ಹಾಗೂ ಆಕೆಯ ಪ್ರಿಯಕರನ ಸಂಚಿನಿಂದ ರಾಜಾ ರಘುವಂಶಿ ಕೊಲೆಯಾಗಿದ್ದರು.

ರಾಜಾ ರಘುವಂಶಿಯನ್ನು ಆತನ ಹೆಂಡತಿ ಸೋನಂ ಕೊಲೆ ಮಾಡಿಸಿದ ರೀತಿಯಲ್ಲೇ ಅಂಜಲಿ ಕೂಡ ತನ್ನ ಗಂಡನನ್ನು ಕೊಲ್ಲಲು ಪ್ಲಾನ್ ಮಾಡಿರಬಹುದಾ? ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಈ ದೃಷ್ಟಿಕೋನದಿಂದ ಯೋಚನೆ ಮಾಡಿದ ಪೊಲೀಸರು ಅಂಜಲಿ ಮೇಲೊಂದು ಕಣ್ಣಿಟ್ಟಿದ್ದರು. ಹೀಗಾಗಿ, ಮತ್ತೊಮ್ಮೆ ಪೊಲೀಸರು ತಮ್ಮದೇ ಸ್ಟೈಲ್​ನಲ್ಲಿ ತನಿಖೆ ನಡೆಸಿದಾಗ ಅಂಜಲಿ ತನ್ನ ಗೆಳೆಯ ಸಂಜು ಜೊತೆ ಸೇರಿ ಗಂಡ ಆಶಿಶ್ ಕೊಲೆಗೆ ಸಂಚು ರೂಪಿಸಿದ್ದಳು ಎಂಬುದು ಬಯಲಾಗಿದೆ. ಈ ಮೂಲಕ ಮೇಘಾಲಯದ ರೀತಿಯಲ್ಲೇ ರಾಜಸ್ಥಾನದ ಹನಿಮೂನ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಆ ದಿನ ಆಗಿದ್ದೇನು?:

ಅದು ಜನವರಿ 30ರ ಸಂಜೆ. ರಾತ್ರಿ 9ರ ಸುಮಾರಿಗೆ ರಸ್ತೆಯಲ್ಲಿ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ತಕ್ಷಣ ಆ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಅಂಜಲಿ ಪೊಲೀಸರಿಗೆ ಮಾಹಿತಿ ನೀಡಿದಳು. ಆಗ ಪೊಲೀಸರು ಅಪಘಾತದ ಸ್ಥಳವನ್ನು ಸಮೀಕ್ಷೆ ಮಾಡಿದರು. ತಾಂತ್ರಿಕ ದೃಷ್ಟಿಕೋನದಿಂದ ತನಿಖೆ ನಡೆಸಲು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಸಹ ಕರೆಸಲಾಯಿತು.

ಇದನ್ನೂ ಓದಿ: ಬಿಹಾರ: ಲವರ್​ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ

23 ವರ್ಷದ ಅಂಜಲಿ ತಾನು ಮತ್ತು ತನ್ನ ಪತಿ ಸಂಜೆ ವಾಕಿಂಗ್‌ಗೆ ಹೋದಾಗ ಆಶಿಶ್ ಮತ್ತು ತನಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಳು. ತಾನು ಧರಿಸಿದ್ದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದು ಸಹ ಅವರು ಹೇಳಿದ್ದಳು. ಆದರೆ, ತನಿಖೆಯ ಸಮಯದಲ್ಲಿ ವಾಸ್ತವ ಮತ್ತು ಅಂಜಲಿ ನೀಡಿದ ಸಾಕ್ಷ್ಯದ ನಡುವೆ ವ್ಯತ್ಯಾಸಗಳು ಕಂಡುಬಂದಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿತು. ಮರಣೋತ್ತರ ಪರೀಕ್ಷೆಯಲ್ಲಿ ಆಶಿಶ್‌ನ ದೇಹದಲ್ಲಿ ಗಾಯದ ಗುರುತುಗಳಿರುವುದಾಗಿ ತಿಳಿಸಲಾಗಿತ್ತು. ವೈದ್ಯಕೀಯ ವರದಿಯ ಪ್ರಕಾರ ಅವನ ಕತ್ತು ಹಿಸುಕಿ ಕೊಲ್ಲಲ್ಪಟ್ಟಂತೆ ಕಂಡುಬಂದಿತ್ತು. ಮತ್ತೊಂದೆಡೆ, ಚಿನ್ನ ದೋಚಿದರೂ ಅಂಜಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು ಪೊಲೀಸರಿಗೆ ಅಚ್ಚರಿ ಮೂಡಿಸಿತ್ತು.

ಅಂಜಲಿ ತನ್ನ ಮನೆಯ ಹತ್ತಿರ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಳು ಎಂದು ಆಕೆಯ ಫೋನ್ ದಾಖಲೆಗಳು ದೃಢಪಡಿಸಿತ್ತು. ಅಂಜಲಿ ಮತ್ತು ಆಶಿಶ್ 3 ತಿಂಗಳ ಹಿಂದೆ ವಿವಾಹವಾದರು. ಆದರೆ, ಈ ಮದುವೆಯಿಂದ ಅಂಜಲಿ ಅತೃಪ್ತಳಾಗಿದ್ದಳು. ಆಕೆ ತವರುಮನೆಗೆ ಬಂದಾಗ ಮತ್ತೆ ಮಾಜಿ ಪ್ರಿಯಕರ ಸಂಜು ಜೊತೆ ಸಂಬಂಧ ಬೆಳೆಸಿದಳು. ಆ ಸಮಯದಲ್ಲಿ ಇಬ್ಬರೂ ಆಶಿಶ್‌ನ ಕೊಲೆಯ ಪ್ಲಾನ್ ಮಾಡಿದ್ದರು.

ಇದನ್ನೂ ಓದಿ: ಮೇಘಾಲಯದ ಹನಿಮೂನ್​ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ

ಗಂಡನ ಮನೆಗೆ ಹೋದ ಬಳಿಕ ಮೊದಲೇ ಪ್ಲಾನ್ ಮಾಡಿದಂತೆ ಜನವರಿ 30ರಂದು ಅಂಜಲಿ ರಾತ್ರಿ ಊಟವಾದ ನಂತರ ಆಶಿಶ್‌ನ ಜೊತೆ ವಾಕಿಂಗ್ ಹೋಗಿದ್ದಳು. ಆಗ ಆಕೆ ಬೇಕೆಂದೇ ಆಶಿಶ್‌ನನ್ನು ಒಂದು ನಿರ್ಜನ ರಸ್ತೆಗೆ ಕರೆದೊಯ್ದಳು. ಅಲ್ಲಿ ಸಂಜು ಮತ್ತು ಅವನ ಸಹಚರರಾದ ರೋಹಿತ್, ಬಾದಲ್ ಪೊದೆಗಳಲ್ಲಿ ಅಡಗಿಕೊಂಡಿದ್ದರು. ಅವರು ಆಶಿಶ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದು, ನಂತರ ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದರು. ತನ್ನ ಮೇಲೆ ಅನುಮಾನ ಬರಬಾರದು ಎಂದು ಅಂಜಲಿ ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗೆ ನೀಡಿ, ದರೋಡೆಯಾಗಿದೆ ಎಂದು ನಂಬಿಸಲು ಪ್ರಯತ್ನಿಸಿದ್ದಳು. ಆ ದಾಳಿಯ ನಂತರ ಅವಳು ಪ್ರಜ್ಞಾಹೀನಳಂತೆ ನಟಿಸಿದಳು. ಆದರೆ ಆಶಿಶ್‌ನ ದೇಹದ ಮೇಲಿದ್ದ ಗಾಯದ ಗುರುತುಗಳು ಕೊಲೆಯ ಸಂಚು ಬಯಲಾಗಲು ಕಾರಣವಾಯಿತು.

ಪೊಲೀಸ್ ತನಿಖೆ ವೇಳೆ ಅಂಜಲಿ ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದುದರಿಂದ ಪೊಲೀಸರು ಅನುಮಾನಗೊಂಡರು. ಕೊನೆಗೆ ಈ ಬಗ್ಗೆ ಅಂಜಲಿಯ ತನಿಖೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಳು. ಪೊಲೀಸರು ಅಂಜಲಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *